ರಾಯಚೂರು: ಜನ ಸಂಗ್ರಾಮ ಪರಿಷತ್ ವತಿಯಿಂದ ಗಣಿಭಾದಿತ ಜನರ ಬದುಕು ಮತ್ತು ಪರಿಸರ ಪುನಶ್ಚೇತನ ಸಂಕಲ್ಪ ಸಮಾವೇಶವನ್ನು ಸೆ.4ರಂದು ಸಂಡೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್‌ನ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಜಿಂದಾಲ್ ಕಂಪನಿಗೆ ಭೂಮಿಯನ್ನು ಮಾರಾಟ ಮಾಡಲು ಮುಂದಾಗಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವರ್ತನೆ ನಾಡದ್ರೋಹವಾಗಿದೆ ಎಂದು ಕಿಡಿ ಕಾರಿದರು.
ಇದನ್ನೂ ಓದಿ: ತುಂಗಭದ್ರಾ ಎಡದಂಡೆ ಕಾಲುವೆಯ ಅಕ್ರಮ ನೀರಾವರಿ ತಡೆಗೆ ಸಂಬಂಧಿಸಿ ನಿರೀಕ್ಷಿತ ಪರಿಹಾರ ಸಿಕ್ಕಿಲ್ಲ ; ರಾಘವೇಂದ್ರ ಕುಷ್ಟಗಿ ಅಸಮಾಧಾನ
ಜಿಂದಾಲ್‌ಗೆ ಭೂಮಿ ಮಾರಾಟ ಮಾಡುವುದರಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೈವಾಡವಿದೆ. ಅಧಿಕಾರಿಕ್ಕೆ ಬಂದ ಎಲ್ಲ ಪಕ್ಷಗಳು ಇದೇ ರೀತಿಯ ಜನವಿರೋಧಿ ಕೆಲಸವನ್ನು ಮಾಡುತ್ತಿವೆ. ಈ ಹಿಂದೆ ಬಿಜೆಪಿ ಸರ್ಕಾರದ ಕೋಮುವಾದ ಸೃಷ್ಠಿಸುವ ಹಾಗೂ ಭ್ರಷ್ಟಾಚಾರದಿಂದ ಕುಡಿದ ಸರ್ಕಾರವಾಗಿತ್ತು ಇದೀಗ ಕಾಂಗ್ರೆಸ್ ಕೂಡ ಭ್ರಷ್ಟಾಚಾರಕ್ಕೆ ನಿಂತು ಪಕ್ಷದ ಮೇಲಿಟ್ಟಿರುವ ಜನರ ವಿಶ್ವಾಸವನ್ನು ಕಳೆದುಕೊಂಡಿದೆ ಎಂದರು.
ಬಿಜೆಪಿಯವರು ಕೋಮುವಾದಿಗಳಾದರೆ ಕಾಂಗ್ರೆಸ್ ಪರಮ ಜಾತಿ ವಾದಿಗಳಾಗಿ ವರ್ತಿಸುತ್ತಿದ್ದಾರೆ. ಹಿಂದೆ ಬಿಜೆಪಿ ಸರ್ಕಾರ ಜಿಂದಾಲ್‌ಗೆ ಭೂಮಿ ನೀಡಲು ಮುಂದಾಗಿರುವ ಸಂದರ್ಭದಲ್ಲಿ ವಿರೋಧಿಸಿದ್ದ ಸಿದ್ದರಾಮಯ್ಯ ಸಚಿವ ಸಂಪುಟದ ತೀರ್ಮಾನದ ಮೂಲಕ ಜಿಂದಾಲ್‌ಗೆ ಭೂಮಿ ಮಾರಾಟ ಮಾಡಲು ಮುಂದಾಗಿದ್ದು, ಸ್ದಿರಾಮಯ್ಯ ಸಾಚಾ ಎಂದು ಹೇಳಿಕೊಳ್ಳುವಂತಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ಜಿಂದಾಲ್ ಕಂಪನಿಗೆ ಭೂಮಿ ನೀಡಬೇಡಿ
ಹಿಂದೆ ಇಂದಿರಾಗಾಂಧಿ ವಿಜಯನಗರ ಉಕ್ಕು ಕಾರ್ಖಾನೆಗೆ 10 ಸಾವಿರ ಎಕರೆ ಭೂಮಿಯನ್ನು ನೀಡಿದ್ದು ನಂತರ ಅದನ್ನು ಜಿಂದಾಲ್‌ಗೆ ನೀಡಲಾಯಿತು. ಇದೀಗ ಅದೇ ಕಾಂಗ್ರೆಸ ಸರ್ಕಾರ 3600 ಎಕರೆ ಭೂಮಿಯನ್ನು ಮತ್ತೆ ಜಿಂದಾಲ್‌ಗೆ ಬಂಗಾರದ ತಟ್ಟೆಯಲ್ಲಿ ಬಾಗೀನ ನೀಡಿದಂತೆ ನೀಡಲು ಮುಂದಾಗಿರುವುದು ಖಂಡನೀಯ ಎಂದರು.
ಈ ಎಲ್ಲ ಅಂಶಗಳನ್ನು ಚರ್ಚಿಸಲು ಸಂಕಲ್ಪ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಪತ್ರಕರ್ತ ಹಾಗೂ ಪರಿಸರ ಹೋರಾಟಗಾರ ನಾಗೇಶ ಹೆಗ್ಡೆ, ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್ ಹಿರೆಮಠ, ಶಿವಮೊಗ್ಗ ಜನಸಂಗ್ರಾಪ ಪರಿಷತ್‌ನ ಜಿಲ್ಲಾಧ್ಯಕ್ಷ ಅಖಿಲೇಶ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಖಾಜಾ ಅಸ್ಲಂ, ಜಾನ್ ವೆಸ್ಲಿ, ಪರಪ್ಪ ನಾಗೋಲಿ ಸೇರಿದಂತೆ ಇತರರಿದ್ದರು.