ಹವಾಮಾನ ವೈಪರೀತ್ಯಕ್ಕೆ ರೈತರ ಬದುಕು ದುಸ್ತರ – ಡಾ.ಅಶೋಕ ದಳವಾಯಿ ಕಳವಳ

ರಾಯಚೂರು: ಜಾಗತಿಕವಾಗಿ ಆಹಾರ ಉತ್ಪಾದನೆಯಲ್ಲಿ ಭಾರತ ಉನ್ನತ ಸ್ಥಾನ ಸಂಪಾದಿಸಿದ್ದರೂ, ಹವಾಮಾನ ಬದಲಾವಣೆಯಿಂದ ಕೃಷಿಕರ ಬದುಕು ದುಸ್ತರವಾಗಿದೆ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಮಂತ್ರಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅಶೋಕ ದಳವಾಯಿ ಕಳವಳ ವ್ಯಕ್ತಪಡಿಸಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿವಿಯ 9ನೇ ಘಟಿಕೋತ್ಸವ ಸಮಾರಂಭದಲ್ಲಿ ಘಟಿಕೋತ್ಸವದ ಭಾಷಣ ಮಾಡಿದರು.

ಹಳೇ ಕೃಷಿ ಪದ್ಧತಿ ರೈತರು ಬದಲಿಸಿಕೊಂಡು ಆಧುನಿಕತೆಗೆ ಒಗ್ಗಿಕೊಳ್ಳುವಂತೆ ಮಾಡುವ ಮಹತ್ವದ ಕಾರ್ಯಕ್ಕೆ ಭಾವಿ ಕೃಷಿ ವಿಜ್ಞಾನಿಗಳು ಪಣ ತೊಡಬೇಕಿದೆ. ಹಸಿರು ಕ್ರಾಂತಿಯ ನಂತರ ಭಾರತ ಮತ್ತು ಚೀನಾದಲ್ಲಿ ಹೆಚ್ಚಿನ ಇಳುವರಿ ತರುವ ಗೋಧಿ ಹಾಗೂ ಭತ್ತದ ಬೆಳೆಗೆ ಮುಂದಾಗಿದ್ದಕ್ಕೆ ಉತ್ತಮ ಪ್ರತಿಫಲ ದೊರೆತಿದೆ. ಆಹಾರ ಧಾನ್ಯಗಳಿಗೆ ಮಾರುಕಟ್ಟೆ ವಿಸ್ತರಿಸಿಕೊಂಡಿದೆ. ವಿಪರ್ಯಾಸ ಎಂದರೆ ಹೆಚ್ಚಿನ ರಾಸಾಯನಿಕ ಔಷಧ ಹಾಗೂ ಮಿತಿ ಮೀರಿ ನೀರು ಬಳಕೆಯಿಂದ ಮಣ್ಣು ನೈಸರ್ಗಿಕವಾದ ಫಲವತ್ತತೆ ಕಳೆದುಕೊಳ್ಳುತ್ತಿದೆ. ಹವಾಮಾನ ಬದಲಾವಣೆಯ ಪರಿಣಾಮ ಕೃಷಿ ಕ್ಷೇತ್ರದ ಮೇಲೆ ಬಿದ್ದಿದೆ. ಹೊಸ ತಾಂತ್ರಿಕತೆ ಬದಲಿಗೆ ಹವಾಮಾನಕ್ಕೆ ಅನುಗುಣವಾಗಿ ತಾಂತ್ರಿಕತೆ ರೂಪಿಸುವ ಸವಾಲಿದೆ ಎಂದರು.

ಇದಕ್ಕೂ ಮುನ್ನ ಘಟಿಕೋತ್ಸವಕ್ಕೆ ಸಹಕುಲಾಧಿಪತಿಗಳಾದ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ, ಅಶೋಕ ದಳವಾಯಿ ಹಾಗೂ ವಿವಿಧ ವಿಭಾಗಗಳ ಡೀನ್, ವಿವಿ ವ್ಯವಸ್ಥಾಪನ ಮಂಡಳಿ ಸದಸ್ಯರನ್ನು ಅತ್ಯಂತ ಶಿಸ್ತು ಬದ್ಧ್ದವಾಗಿ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಅವರು ಸಭಾಂಗಣಕ್ಕೆ ಕರೆ ತಂದರು. ಕುಲಸಚಿವ ಡಾ.ಡಿ.ಎಂ.ಚಂಡರಕಿ, ವಿವಿಧ ವಿಭಾಗಗಳ ಡೀನ್‌ಗಳಾದ ಡಾ.ಎಸ್.ಕೆ.ಮೇಟಿ, ಡಾ.ಐ.ಶಂಕರೆಗೌಡ, ಡಾ.ಎಂ.ಭೀಮಣ್ಣ ಸೇರಿ ವಿದ್ಯಾರ್ಥಿಗಳು, ಮುಖ್ಯಸ್ಥರು, ಸಿಬ್ಬಂದಿ, ಪಾಲಕರು ಉಪಸ್ಥಿತರಿದ್ದರು.

ಚಿನ್ನದ ಪದಕ
ಕೃಷಿ ವಿಭಾಗದ ಬಿಎಸ್ಸಿ ಪದವಿಯ ಏಳು ವಿದ್ಯಾರ್ಥಿಗಳಿಗೆ, ಬಿಟೆಕ್‌ನಲ್ಲಿ ಒಬ್ಬ ವಿದ್ಯಾರ್ಥಿನಿ, ಎಂಎಸ್ಸಿಯ ವಿವಿಧ ವಿಭಾಗದ 12, ಎಂಟೆಕ್‌ನ 3 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಪದವಿ ಪ್ರಮಾಣ ಪತ್ರ ಹಾಗೂ ಐವರಿಗೆ ಪಿಎಚ್‌ಡಿ ಪದವಿ ಜತೆಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *