ರಾಯಚೂರು: ನಗರದ ನವ ಚೇತನ ಶಾಲೆಯ ಆವರಣದಲ್ಲಿ ರೋಟರಿ ಕಾಟನ್ ಸಿಟಿ, ಶಿವಂ ಆಸ್ಪತ್ರೆ ಸಹಯೋಗದಲ್ಲಿ ಕ್ಯಾನ್ಸರ್ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆ ವೈದ್ಯ ಶಾಂತಲಿಂಗ ನಿಗಡಗಿ ತಿಳಿಸಿದರು.
ಸ್ಥಳೀಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಕ್ಯಾನ್ಸರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಜನರಲ್ಲಿರುವ ಭಯ ದೂರ ಮಾಡುವ ನಿಟ್ಟಿನಲ್ಲಿ ಆಸ್ಪತ್ರೆ ಕಾರ್ಯಕ್ರಮ ರೂಪಿಸುತ್ತಿದೆ ಎಂದರು.
ಶಿಬಿರದಲ್ಲಿ ತಜ್ಞ ವೈದ್ಯರು ತಪಾಸಣೆ ನಡೆಸಿ ಕ್ಯಾನ್ಸರ್ ಹಂತಗಳು ಹಾಗೂ ಚಿಕಿತ್ಸೆ ಕುರಿತು ಸಲಹೆ ನೀಡಲಿದ್ದು, ಬಹಳಷ್ಟು ಜನರು ರೋಗ ಉಲ್ಬಣಗೊಂಡಾಗ ಚಿಕಿತ್ಸೆಗೆ ಆಗಮಿಸುತ್ತಿದ್ದರಿಂದ ರೋಗ ಗುಣಪಡಿಸಲು ಸಾಧ್ಯವಾಗದಂತಹ ಸ್ಥಿತಿ ಉಂಟಾಗುತ್ತಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಗರ್ಭಕೋಶ ಮತ್ತು ಗಂಟಲು ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತಿದ್ದು, ತಂಬಾಕು ಸೇವನೆಯಿಂದ ಈ ಭಾಗದಲ್ಲಿ ಹೆಚ್ಚಿನ ಜನರು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಮಹಿಳೆಯಲ್ಲಿ ಹೆಚ್ಚಾಗಿ ಸ್ತನ ಕ್ಯಾನ್ಸರ್ ಕಂಡು ಬರುತ್ತಿದೆ. 40 ವಯೋಮಾನದ ಮಹಿಳೆಯರು ಮೆಮೋಗ್ರಫಿ, ಪ್ರಾಪ್ಸ್ ತಪಾಸಣೆ ಮಾಡಿಕೊಂಡಲ್ಲಿ ರೋಗ ಆರಂಭದ ಹಂತದಲ್ಲಿದ್ದರೆ ಬೇಗ ಗುಣಪಡಿಸಬಹುದಾಗಿದೆ ಎಂದು ಡಾ.ಶಾಂತಲಿಂಗ ನಿಗಡಗಿ ಹೇಳಿದರು. ರೋಟರಿ ಕಾಟನ್ ಸಿಟಿ ಪದಾಧಿಕಾರಿಗಳಾದ ಅಶೋಕ ಅಂತರಗಂಗಿ, ಈರಣ್ಣ ಚಿತ್ರಗಾರ, ಶಿವಗಿರೀಶ, ಶರಣಗೌಡ, ತಿಮ್ಮನಗೌಡ, ಎಂ.ಕೆ.ವೆಂಕಟೇಶ, ಡಾ.ಶಶಿಧರ ಮೂಲಿಮನಿ, ಸೋಮನಾಥ ಉಪಸ್ಥಿತರಿದ್ದರು.