ಬಿ.ವಿ.ನಾಯಕರಿಂದ ಬಾಲಿಷತನದ ಹೇಳಿಕೆ- ಬಿಜೆಪಿ ಮುಖಂಡ ತ್ರಿವಿಕ್ರಮ ಜೋಷಿ ಟೀಕೆ

ರಾಯಚೂರು: ಗಾಂಧೀಜಿ ಅವರನ್ನು ಬಿಜೆಪಿಯವರು ಕೊಲೆ ಮಾಡಿದ್ದಾರೆ ಎಂಬ ಹೇಳಿಕೆ ಯಾದಗಿರಿಯಲ್ಲಿ ನೀಡಿರುವ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ ವಿರುದ್ಧ ರಾಜ್ಯ ಚುನಾವಣೆ ಆಯೋಗ ಹಾಗೂ ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗೆ ದೂರು ನೀಡಲಾಗುವುದು ಎಂದು ಬಿಜೆಪಿ ಮುಖಂಡ ತ್ರಿವಿಕ್ರಮ ಜೋಷಿ ತಿಳಿಸಿದರು.

ಸ್ಥಳೀಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಈಗಾಗಲೇ ಪಾಕಿಸ್ತಾನ ಪರ ಹೇಳಿಕೆ ನೀಡಿರುವ ಕುರಿತು ರಾಜ್ಯ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಲಾಗಿದ್ದು, ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸುವಂತೆ ಒತ್ತಾಯಿಸಲಾಗುವುದು ಎಂದರು.

ಈ ಹಿಂದೆ ಬಿ.ವಿ.ನಾಯಕ ಪುಟ್ಟ ರಾಷ್ಟ್ರ ಪಾಕಿಸ್ತಾನದ ಮೇಲೆ ಭಾರತ ದಾಳಿ ನಡೆಸಿದ್ದು ಸರಿಯಲ್ಲ ಎಂದು ಹೇಳಿಕೆ ನೀಡಿದ್ದನ್ನು ಖಂಡಿಸಿ ಪಕ್ಷದಿಂದ ರಾಜ್ಯ ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ. ಇದಕ್ಕೆ ಸ್ಪಷ್ಟೀಕರಣ ನೀಡುವ ಸಂದರ್ಭದಲ್ಲಿ ಗಾಂಧೀಜಿ ಕೊಂದ ಬಿಜೆಪಿಯವರಿಂದ ನಾನು ದೇಶಾಭಿಮಾನ ಕಲಿಯುವ ಅವಶ್ಯಕತೆಯಿಲ್ಲ ಎಂದು ಬಾಲಿಷತನದ ಹೇಳಿಕೆ ನೀಡಿದ್ದಾರೆ.

ಬಿ.ವಿ.ನಾಯಕ ಇತಹಾಸ ಅರಿತುಕೊಳ್ಳದೆ ಮಾತನಾಡಿದ್ದು, 1952ರಲ್ಲಿ ಜನಸಂಘ ಹುಟ್ಟಿದ್ದು, 1980ರಲ್ಲಿ ಬಿಜೆಪಿ ಅಸ್ತಿತ್ವಕ್ಕೆ ಬಂದಿದೆ. ಆದರೆ ಗಾಂಧೀಜಿ ಹತ್ಯೆ 1948ರಲ್ಲಿ ನಡೆದಿದೆ. ಸೋಲುವ ಭೀತಿಯಿಂದ ಹತಾಶರಾಗಿ ಬಿ.ವಿ.ನಾಯಕ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದರು. ಬಿ.ವಿ.ನಾಯಕರ ಹೇಳಿಕೆಯ ದೃಶ್ಯಾವಳಿಗಳನ್ನು ಈಗಾಗಲೇ ಪಕ್ಷದ ರಾಜ್ಯ ನಾಯಕರಿಗೆ ಕಳುಹಿಸಲಾಗಿದ್ದು, ಸ್ಥಳೀಯವಾಗಿ ವಕೀಲರ ಮೂಲಕ ಚುನಾವಣಾಧಿಕಾರಿಗೆ ದೂರು ಸಲ್ಲಿಸಲಾಗುತ್ತಿದೆ ಎಂದು ತ್ರಿವಿಕ್ರಮ ಜೋಷಿ ತಿಳಿಸಿದರು. ಈ ಸಂದರ್ಭ ಪಕ್ಷದ ಮುಖಂಡರಾದ ಯು.ದೊಡ್ಡಮಲ್ಲೇಶ, ಚಂದ್ರಶೇಖರ ಉಪಸ್ಥಿತರಿದ್ದರು.

ಮಾ.12ರಂದು ಮಧ್ಯಾಹ್ನ 3ಕ್ಕೆ ಕೊಪ್ಪಳ ಲೋಕಸಭೆ ಕ್ಷೇತ್ರದ ಗಂಗಾವತಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಸುಮಾರು 2 ಲಕ್ಷ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ರಾಯಚೂರು ಲೋಕಸಭೆ ಕ್ಷೇತ್ರದಿಂದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
| ಜೆ.ಶರಣಪ್ಪಗೌಡ ಬಿಜೆಪಿ ಜಿಲ್ಲಾ ಅಧ್ಯಕ್ಷ