More

    ರಾಯರ ಪಟ್ಟಾಭಿಷೇಕ ಮಹೋತ್ಸವ ಸಂಭ್ರಮ


    ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಬುಧವಾರ ಶ್ರೀ ರಾಘವೇಂದ್ರ ಸ್ವಾಮಿಗಳ 402ನೇ ಪಟ್ಟಾಭಿಷೇಕ ಮಹೋತ್ಸವದ ಸಂಭ್ರಮ ಮನೆಮಾಡಿತ್ತು. ಸಾವಿರಾರು ಭಕ್ತರು ಪಾಲ್ಗೊಂಡು ರಾಯರ ಅನುಗ್ರಹಕ್ಕೆ ಪಾತ್ರರಾದರು.

    ಪಟ್ಟಾಭಿಷೇಕ ಮಹೋತ್ಸವ ನಿಮಿತ್ತ ರಾಯರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ನೆರವೇರಿಸಿದ ನಂತರ ಶ್ರೀಮಠದ ಪ್ರಾಕಾರದಲ್ಲಿ ರಾಯರ ಪಾದುಕೆಗಳಿಗೆ ಕನಕಾಭಿಷೇಕ, ಮುತ್ತಿನ ಅಭಿಷೇಕ ನೆರವೇರಿಸಿ ಭಕ್ತಿ ಸಮರ್ಪಣೆ ಮಾಡಲಾಯಿತು. ಬಳಿಕ ರಾಯರ ಪಾದುಕೆಗಳನ್ನಿಟ್ಟು ಸುವರ್ಣ ರಥೋತ್ಸವ ನೆರವೇರಿಸಲಾಯಿತು.

    ಈ ಸಂದರ್ಭದಲ್ಲಿ ಶ್ರೀಮಠ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಿ, ಜಗತ್ತಿನಲ್ಲಿ ನಾಸ್ತಿಕತೆ ಹೋಗಲಾಡಿಸುವ ಮೂಲಕ ಜನರಲ್ಲಿ ಆಸ್ತಿಕತೆ ಮೂಡಿಸುವುದರ ಜತೆಗೆ ಧರ್ಮದ ಮಹತ್ವ, ಶಾಂತಿ ಮೂಡಿಸುವ ಕೆಲಸವನ್ನು ರಾಯರು ಮಾಡಿದ್ದಾರೆ. ನರಸಿಂಹ ದೇವರ ಅನುಗ್ರಹದಿಂದ ಭೂಲೋಕದಲ್ಲಿ ಅವತಾರವೆತ್ತಿದ ಶ್ರೀ ರಾಘವೇಂದ್ರ ಸ್ವಾಮಿಗಳು ಮಹಾಮಹಿಮರಾಗಿದ್ದು, ಜನರ ಇಷ್ಟಾರ್ಥಗಳನ್ನು ನೆರವೇರಿಸುತ್ತಾರೆ. ಶ್ರೀರಾಮ ವನವಾಸಕ್ಕೆ ತೆರಳಿದಾಗ ಭರತ ಶ್ರೀರಾಮನ ಪಾದುಕೆಗಳನ್ನು ಸಿಂಹಾಸನದ ಮೇಲಿಟ್ಟು ರಾಜ್ಯಭಾರ ಮಾಡಿದಂತೆ ರಾಯರು ಯೋಗೀಂದ್ರ ತೀರ್ಥರಿಗೆ ತಮ್ಮ ಪಾದುಕೆಗಳನ್ನು ನೀಡಿ ಅನುಗ್ರಹಿಸಿದ್ದಾರೆ. ಇಂದಿಗೂ ಆ ಪಾದುಕೆಗಳನ್ನಿಟ್ಟು ಪೂಜೆ ಸಲ್ಲಿಸುತ್ತಾ ಬರಲಾಗುತ್ತಿದೆ ಎಂದು ಹೇಳಿದರು.

    ಸುಪ್ರೀಂ ಕೋರ್ಟ್‌ನ ಪ್ರಧಾನ ವಕೀಲ ವೆಂಕಟರಮಣಿ ಮಾತನಾಡಿ, ರಾಯರ ಮಠ ಜನರಲ್ಲಿ ಧಾರ್ಮಿಕ ಭಾವನೆ ಜಾಗೃತಗೊಳಿಸುವುದರ ಜತೆಗೆ ಸಮಾಜಿಕ ಕಾರ್ಯಗಳಲ್ಲಿಯೂ ಮುಂಚೂಣಿಯಲ್ಲಿದೆ. ಮಂತ್ರಾಲಯಕ್ಕೆ ಬಂದು ರಾಯರ ದರ್ಶನ ಪಡೆದು ಹೋದರೆ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದರು.

    ಈ ಸಂದರ್ಭದಲ್ಲಿ ಶ್ರೀಮಠದ ಎಸ್.ಕೆ.ಶ್ರೀನಿವಾಸರಾವ್, ವಿದ್ವಾನ್ ಡಾ.ಎನ್. ವಾದಿರಾಜಾಚಾರ್, ಕರ್ನೂಲ್‌ನ ಜಂಟಿ ಆಯುಕ್ತ ಅಭಿಷೇಕ ಕುಮಾರ, ಕೃಷ್ಣಮೂರ್ತಿ ಶರ್ಮಾ, ಶ್ರೀನಿವಾಸ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts