ಕುಮಾರಸ್ವಾಮಿ ಬೇಜವಾಬ್ದಾರಿ ಮುಖ್ಯಮಂತ್ರಿ – ಬಿ.ಎಸ್.ಯಡಿಯೂರಪ್ಪ

ರಾಯಚೂರು: ಒಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಸ್ವಾತಂತ್ರೃ ಇಲ್ಲ ಎಂದು ಹೇಳುವ ಮೂಲಕ ಸಿಎಂ ಎಚ್.ಡಿ.ಕುಮಾರಸ್ವಾಮಿ ತಾವೊಬ್ಬ ಬೇಜವಾಬ್ದಾರಿ ಸಿಎಂ ಎಂದು ತೋರಿಸಿಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟೀಕಿಸಿದರು.

ಸ್ಥಳೀಯ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮೋದಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ಭೀಕರ ಬರವಿದೆ. ಕೆಲಸವಿಲ್ಲದೆ ಜನರು ಗುಳೆ ಹೋಗುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲ ಎಂದರು.

ರೈತರ 45 ಸಾವಿರ ಕೋಟಿ ರೂ. ಸಾಲಮನ್ನಾ ಮಾಡುವುದಾಗಿ ಬೊಬ್ಬೆ ಹೊಡೆದಿದ್ದ ಮುಖ್ಯಮಂತ್ರಿಗಳು ಸಾಲ ಮನ್ನಾ ಎಷ್ಟು ಮಾಡಿದ್ದಾರೆ ಎನ್ನುವುದನ್ನು ಹೇಳಬೇಕು. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 22 ಸ್ಥಾನ ಗಳಿಸಿದರೆ ಕಾಂಗ್ರೆಸ್, ಜೆಡಿಎಸ್ ಕಚ್ಚಾಡಿಕೊಂಡು ಅಧಿಕಾರದಿಂದ ಇಳಿಯಲಿದ್ದಾರೆ.

ಲೋಕಸಭೆ ಚುನಾವಣೆಗೆ ಕೇವಲ 7 ವಾರಗಳು ಉಳಿದಿವೆ. ಪ್ರಧಾನಿ ಒಂದು ದಿನವೂ ವಿಶ್ರಾಂತಿ ಪಡೆಯದೆ ಕೆಲಸ ಮಾಡುತ್ತಿದ್ದಾರೆ. ನಾನು ಕಳೆದ 10 ದಿನಗಳಿಂದ ಪ್ರವಾಸದಲ್ಲಿದ್ದು, ಚುನಾವಣೆ ಮುಗಿಯುವವರೆಗೂ ಮನೆಗೆ ಹೋಗುವುದಿಲ್ಲ. ಕಾರ್ಯಕರ್ತರು ಪಕ್ಷಕ್ಕಾಗಿ 7 ವಾರ ಸಮಯ ಕೊಡುವ ಮೂಲಕ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು.

ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯವರ ಸಾಧನೆಯನ್ನು ಪ್ರತಿ ಮನೆಗೂ ಮುಟ್ಟಿಸುವ ಕೆಲಸ ಕಾರ್ಯಕರ್ತರು ಮಾಡಬೇಕು. ಕಮಲ ಜ್ಯೋತಿ ಯಾತ್ರೆ, ಬೈಕ್ ರ‌್ಯಾಲಿಯನ್ನು ವಿಜಯೋತ್ಸವ ರೀತಿಯಲ್ಲಿ ಆಚರಿಸುವ ಮೂಲಕ ಪಕ್ಷವನ್ನು ಬಲವರ್ಧನೆ ಮಾಡಬೇಕು.

ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು. ಈ ಬಗ್ಗೆ ಮುಖಂಡರು ಕಾರ್ಯಕರ್ತರ ಮೇಲೆ ವಿಶ್ವಾಸವಿಟ್ಟು ಗೆಲುವು ನಮ್ಮದೆ ಎಂದು ಹೇಳುತ್ತಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕರಾದ ಡಾ.ಶಿವರಾಜ ಪಾಟೀಲ್, ಕೆ.ಶಿವನಗೌಡ ನಾಯಕ, ಹಾಲಪ್ಪ ಆಚಾರ್, ಮಾಜಿ ಶಾಸಕರಾದ ಎ.ಪಾಪಾರೆಡ್ಡಿ, ತಿಪ್ಪರಾಜು ಹವಾಲ್ದಾರ್, ಬಸವನಗೌಡ ಬ್ಯಾಗವಾಟ್, ಪಕ್ಷದ ಜಿಲ್ಲಾ ಅಧ್ಯಕ್ಷ ಜೆ.ಶರಣಪ್ಪಗೌಡ ಇತರರಿದ್ದರು.