ರಾಯಚೂರು: ಅಯ್ಯಪ್ಪ ಸ್ವಾಮಿ ಬಗ್ಗೆ ಅವಮಾನಕರವಾಗಿ ಮಾತನಾಡಿರುವ ಭಾರತ ನಾಸ್ತಿಕರ ಸಂಘದ ತೆಲಂಗಾಣ ರಾಜ್ಯಾಧ್ಯಕ್ಷ ಭೈರಿ ನರೇಂದ್ರರನ್ನು ದೇಶದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ, ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಲಾಯಿತು.
ಭೈರಿ ನರೇಂದ್ರ ಹಿಂದೂ ದೇವತೆಗಳ ಬಗ್ಗೆ ಹಾಗೂ ಆಚರಣೆ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತನಾಡುವ ಮೂಲಕ ಜನರ ಭಾವನೆಗೆ ಧಕ್ಕೆ ತಂದಿದ್ದಾರೆ. ದೇಶದಲ್ಲಿ ಎಲ್ಲ ಧರ್ಮದ ಜನರು ತಮ್ಮ ಆಚರಣೆಗಳನ್ನು ಮಾಡಲು ಅವಕಾಶವಿದೆ. ದೇವರ ಬಗ್ಗೆ ನಂಬಿಕೆ ಇಲ್ಲದಿದ್ದರೆ ಸುಮ್ಮನಿರಬೇಕು. ಆದರೆ ಮತ್ತೊಬ್ಬರ ಆಚರಣೆ, ನಂಬಿಕೆಗಳ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ.
ಕೂಡಲೇ ಭೈರಿ ನರೇಂದ್ರ ವಿರುದ್ಧ ಕಾನೂನು ಕ್ರಮಕೈಗೊಂಡು ಆತನನ್ನು ದೇಶದಿಂದ ಗಡಿಪಾರು ಮಾಡಬೇಕು. ಇಲ್ಲವಾದರಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.