ರಾಯಚೂರಲ್ಲಿ ನಿರೀಕ್ಷೆ ಮೀರಿ ವ್ಯತಿರಿಕ್ತ ಫಲಿತಾಂಶ – ಕೈ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ

ರಾಯಚೂರು: ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆ ಮೀರಿ ವ್ಯತಿರಿಕ್ತ ಫಲಿತಾಂಶ ಬಂದಿದ್ದು, ಮತದಾರರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಕಷ್ಟಕರವಾಗಿದೆ .ಜನರು ನೀಡಿದ ತೀರ್ಪಿಗೆ ಬದ್ಧನಾಗಿದ್ದೇನೆ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ ಹೇಳಿದರು.

ಸ್ಥಳೀಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, ಕಾಂಗ್ರೆಸ್ ನಂಬಿಕೊಂಡು ಬಂದಿದ್ದ ಸಿದ್ಧಾಂತದ ಮೇಲೆ ಚುನಾವಣೆ ಎದುರಿಸಿದೆ. ಆ ಸಿದ್ಧಾಂತ ಜನರಿಗೆ ಬೇಡವಾಗಿದ್ದರಿಂದ ಜನರು ನಮ್ಮನ್ನು ದೂರವಿಟ್ಟಿದ್ದಾರೆ.

ಹೈ.ಕ. ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ಭಾಗಕ್ಕೆ 371 ಜೆ ಕೊಡುಗೆ ನೀಡಿತ್ತು. ಆದರೂ ಈ ಭಾಗದ ಜನರು ನಮ್ಮ ಕೈ ಹಿಡಿಯಲಿಲ್ಲ. ಜನರು ಇನ್ನೂ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡು ಬಿಜೆಪಿಯನ್ನು ಬೆಂಬಲಿಸಿದ್ದು, ಆ ನಿರೀಕ್ಷೆಗಳು ಈಡೇರುವಂತಾಗಲಿ.

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದು ಪ್ರಯೋಗವಾಗಿತ್ತು. ಆದರೆ ಅದು ವಿಫಲವಾಗಿದ್ದು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉತ್ತಮವಾಗಿ ಕೆಲಸ ಮಾಡಿದ್ದರೂ ಜನರು ನಮ್ಮ ಕೈಹಿಡಿಯಲಿಲ್ಲ ಎಂದು ಬಿ.ವಿ.ನಾಯಕ ಹೇಳಿದರು.

Leave a Reply

Your email address will not be published. Required fields are marked *