ರಾಯಚೂರು: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಾಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ಹಿಂದು ಹಿತರಕ್ಷಣಾ ಸಮಿತಿ ಜಿಲ್ಲಾ ಘಟಕದಿಂದ ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಇದೇ ವೇಳೆ ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿಂದುಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ಸಹಿಸುವುದಿಲ್ಲ. ಬಾಂಗ್ಲಾದೇಶದ ಹಿಂದುಗಳ ರಕ್ಷಣೆಗೆ ಅಲ್ಲಿನ ಸರ್ಕಾರಗಳು ಮುಂದಾಗಬೇಕು ಎಂದರು.
ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದುಗಳ ಮೇಲೆ ದಾಳಿಗಳು ನಡೆಯುತ್ತಿರುವುದು ಖಂಡನೀಯ, ಇದೊಂದು ಆತಂಕಕಾರಿ ವಿಚಾರವಾಗಿದ್ದು, ಅಲ್ಲಿನ ಸರ್ಕಾರ ಕಾನೂನು ಉಲ್ಲಂಘಕರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸೋಮವಾರಪೇಟೆ ಹಿರೆಮಠದ ಅಭಿನವರಾಚೋಟಿ ವೀರಶಿವಾಚಾರ್ಯ ಸ್ವಾಮೀಜಿ, ಮಂಗಳವಾರಪೇಟೆ ಮಠದ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಮಾಜಿ ಶಾಸಕರಾದ ಬ್ಯಾಗವಾಟ ಬಸನಗೌಡ, ತಿಪ್ಪರಾಜು ಹವಾಲ್ದಾರ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವ್ಯವಸ್ಥಾಪಕ ಕೃಷ್ಣ ಜೋಷಿ, ಪ್ರಮುಖರಾದ ಸಾವಿತ್ರಿ ಪುರುಷೋತ್ತಮ, ರಾಜಕುಮಾರ ಸೇರಿದಂತೆ ಇನ್ನಿತರರಿದ್ದರು.
ಅಂಬೇಡ್ಕರ್ ವೃತ್ತದಿಂದ ಪ್ರಮುಖ ರಸ್ತೆಗಳ ಮೂಲಕ ಡಿಸಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಕಚೇರಿ ಮುಂದೆ ಎಡಿಸಿ ಶಿವಾನಂದ ಭಜಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.