ರಾಯಚೂರು: ಆರ್ಯವೈಶ್ಯ ಅಧಿಕಾರಿಗಳು ಹಾಗೂ ವೃತ್ತಿನಿರತರ ಸಂಘ(ಆಯೋಪ)ದಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಆ.18ರಂದು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಯಚೂರು ಆವೋಪ ಅಧ್ಯಕ್ಷ ಬಿ.ವೆಂಕಟೇಶ ಆಲೂರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 6 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 26 ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ ನೀಡುವುದರ ಜತೆಗೆ 200 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ. 100 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ
ಅಂದು ಕಾರ್ಯಕ್ರಮದ ಉದ್ಘಾಟನೆಯನ್ನು ಸಚಿವ ಎನ್.ಎಸ್ ಬೋಸರಾಜು ನೆರವೇರಿಸಲಿದ್ದು, ಕಾರ್ಯಕ್ರಮದಲ್ಲಿ ಶಾಸಕ ಡಾ.ಶಿವರಾಜ್ ಪಾಟೀಲ್, ವಿಧಾನ ಪರಿಷತ್ ಸದಸ್ಯ ಟಿ.ಎ ಶರವಣ್, ಉದ್ಯಮಿಗಳಾದ ಮಂಚಿಕೊಂಡ ನರಸಿಂಹಯ್ಯ, ಸಾವಿತ್ರಿ ಪುರುಷೋತ್ತಮ, ಗಾಣದಾಳ ಲಕ್ಷ್ಮೀಪತಿ, ಇಲ್ಲೂರು ಮೋಹನ್‌ರಾಜ್ ಸೇರಿ ಇತರರು ಉಪಸ್ಥಿತರಿರಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಪೆಂಡಾಲ್ ಕಿಶೋರ್, ಇಂದುವಾಸಿ ದತ್ತಾತ್ರೇಯ, ಹಿಂಗೋಲಿ ನರೇಂದ್ರ, ಡಾ.ತಿಮ್ಮಶೆಟ್ಟಿ ಇಲ್ಲೂರು ಸೇರಿದಂತೆ ಇತರರಿದ್ದರು.