ಆ.8 ರಿಂದ ಜಿಂದಾಲ್‌ನಿಂದ ಬಳ್ಳಾರಿಗೆ ಪಾದಯಾತ್ರೆ – ಜನಸಂಗ್ರಾಮ ಪರಿಷತ್ ಸಂಸ್ಥಾಪಕ ರಾಘವೇಂದ್ರ ಕುಷ್ಟಗಿ ಹೇಳಿಕೆ

ರಾಯಚೂರು: ಕೃಷ್ಣಾ ಹಾಗೂ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆ, ಜಿಂದಾಲ್‌ಗೆ ಸರ್ಕಾರಿ ಭೂಮಿ ಮಾರಾಟ ಸೇರಿ ಜನ ವಿರೋಧಿ ನಿಲುವುಗಳನ್ನು ಖಂಡಿಸಿ ಆ.8 ಹಾಗೂ 9ರಂದು ಜಿಂದಾಲ್‌ನಿಂದ ಬಳ್ಳಾರಿ ಡಿಸಿ ಕಚೇರಿವರೆಗೆ ಪಾದಯಾತ್ರೆ ನಡೆಸಿ, ಪ್ರತಿಭಟಿಸಲು ನಿರ್ಧರಿಸಲಾಗಿದೆ ಎಂದು ಜನಸಂಗ್ರಾಮ ಪರಿಷತ್ ಸಂಸ್ಥಾಪಕ ರಾಘವೇಂದ್ರ ಕುಷ್ಟಗಿ ಹಾಗೂ ರಾಜ್ಯಾಧ್ಯಕ್ಷ ಟಿ.ಕೆ. ಜಾನ್‌ವೆಸ್ಲಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎರಡೂ ನದಿಗಳಲ್ಲಿ ರಾಜಕಾರಣಿಗಳು, ಭೂ ವಿಜ್ಞಾನ ಮತ್ತು ಗಣಿ ಇಲಾಖೆ, ಪೊಲೀಸ್,ಕಂದಾಯ ಇಲಾಖೆ ಅಧಿಕಾರಿಗಳು ನೈಸರ್ಗಿಕ ಸಂಪನ್ಮೂಲ ದೋಚಿಕೊಳ್ಳಲು ಬೆಂಬಲಿಸುತ್ತಿದ್ದಾರೆ ಎಂದು ಟೀಕಿಸಿದರು.

ಲೋಕಸಭೆ ಚುನಾವಣೆ ಘೋಷಣೆಯಾದಾಗಿನಿಂದ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಯ ಟಾಸ್ಕ್ ಫೋರ್ಸ್ ಸಮಿತಿ ನಿಷ್ಕ್ರಿಯವಾಗಿದೆ. ಡಿಸಿಯವರ 30 ತಾಸುಗಳ ಒಂದು ಪರ್ಮಿಟ್ ಆದೇಶ ಕೂಡಲೆ ರದ್ದು ಪಡಿಸಬೇಕು, ಡಾ.ಮೋಹನ್‌ರಾವ್ ಅವರ ಗ್ರಾಮೀಣ ಠಾಣೆಯಲ್ಲಿನ ಅಕ್ರಮ ಮರಳುಗಾರಿಕೆ, ಹಲ್ಲೆ ದೂರನ್ನು ಗಂಭೀರವಾಗಿ ಪರಿಗಣಿಸಲು ಎಸ್ಪಿ ಕಠಿಣವಾಗಿ ಪಿಎಸ್‌ಐಗೆ ಸೂಚಿಸಬೇಕು, ಜಿಂದಾಲ್‌ಗೆ ಸರ್ಕಾರ ಏಕಪಕ್ಷೀಯವಾಗಿ ಭೂಮಿ ಪರಾಬಾರೆ ಮಾಡುವ ಮೂಲಕ ಜನರ ಹಕ್ಕನ್ನು ಕಸಿದು ಉಳ್ಳವರ, ಉದ್ಯಮಿಗಳ ಪರ ನಿಲುವು ತಾಳಿರುವುದು ದುರಾದೃಷ್ಟಕರ ಸಂಗತಿ ಎಂದರು.

ಎರಡೂ ದಿನಗಳ ಈ ಪಾದಯಾತ್ರೆ ಪ್ರತಿಭಟನೆಯಲ್ಲಿ ಪ್ರಮುಖ ಅಂಶಗಳನ್ನು ಇಟ್ಟುಕೊಂಡು ಹೋರಾಟ ಮಾಡಲಾಗುತ್ತಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಖಜಾಂಚಿ ಖಾಜಾ ಅಸ್ಲಂ ಅಹ್ಮದ್, ಜಿಲ್ಲಾಧ್ಯಕ್ಷ ಭಂಡಾರಿ ವೀರಣ್ಣ ಶೆಟ್ಟಿ, ವಿಭಾಗೀಯ ಕಾರ್ಯದರ್ಶಿ ಭೀಮರಾಯ ಜರದಬಂಡಿ, ಡಾ.ಮೋಹನರಾವ್ ಯು.ಕಾಡ್ಲೂರು ಇದ್ದರು.

Leave a Reply

Your email address will not be published. Required fields are marked *