ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವೆ – ಉಪೇಂದ್ರ

ರಾಯಚೂರು: ಜನರಿಗೆ ಪಕ್ಷದ ಸಿದ್ಧಾಂತಗಳನ್ನು ಮನವರಿಕೆ ಮಾಡಿಕೊಟ್ಟು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ವಿಚಾರದೊಂದಿಗೆ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಅಧ್ಯಕ್ಷ, ನಟ ಉಪೇಂದ್ರ ಹೇಳಿದರು.

ಪ್ರಸ್ತುತ ರಾಜಕೀಯದಲ್ಲಿ ಗೆದ್ದ ಶಾಸಕ, ಸಂಸದರಿಗೆ ಸಂಬಳ ಇದೆ ಎನ್ನುವ ವಿಷಯವೇ ಅನೇಕ ಜನರಿಗೆ ಗೊತ್ತಿಲ್ಲ. ಪಕ್ಷಗಳ ಅಭ್ಯರ್ಥಿಗಳ ಪ್ರಚಾರಕ್ಕೆ ಬಳಸುತ್ತಿರುವ ವೆಚ್ಚ ನೋಡಲಾಗುತ್ತಿಲ್ಲ. ಕೋಟಿಗಟ್ಟಲೆ ಹಣ, ರಾಜಕೀಯ ಕುಟುಂಬ, ಶ್ರೀಮಂತರು ಮಾತ್ರ ಚುನಾವಣೆಗೆ ನಿಲ್ಲಬೇಕು ಎನ್ನುವ ಮನಸ್ಥಿತಿ ಬದಲಿಸಲು ಪ್ರಜಾಕೀಯ ಪಕ್ಷ ಹುಟ್ಟು ಹಾಕಿರುವುದಾಗಿ ಭಾನವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೇರೆ ಪಕ್ಷದವರ ಟೀಕೆ ಮಾಡಲ್ಲ. ಪ್ರಜಾಪ್ರಭುತ್ವದಲ್ಲಿ ಜನಾಧಿಕಾರಕ್ಕೆ ಬಲ ಬರಬೇಕು. ಪುನಃ ರಾಜಾಧಿಕಾರದತ್ತ ಮರಳುತ್ತಿರುವುದು ನೋವಿನ ಸಂಗತಿ. ರಾಜ್ಯದ ಬಳ್ಳಾರಿ ಹೊರತು ಪಡಿಸಿ 27 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಈ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದರೆ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದು ಕಷ್ಟ ಎನ್ನುವ ಕಾರಣಕ್ಕೆ ಸ್ಪರ್ಧಿಸಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಆಲೋಚನೆಯೊಂದಿಗೆ ಸ್ಪರ್ಧಿಸುವೆ ಎಂದು ತಿಳಿಸಿದರು.

ಲೋಕಸಭೆ, ವಿಧಾನಸಭೆ ಚುನಾವಣೆಗೆ ಯಾರಾದರೂ ಸ್ಪರ್ಧಿಸಬಹುದು. ಜನರೇ ತಿಳಿಸುವ ಪ್ರಣಾಳಿಕೆ ಸಿದ್ಧಪಡಿಸಿ ಈಡೇರಿಸುವ ಬಗ್ಗೆ ಖಚಿತ ಭರವಸೆ ನೀಡಬೇಕು. ಆಗದಿದ್ದರೆ ಜನರ ಸಮ್ಮುಖದಲ್ಲಿಯೇ ರಾಜೀನಾಮೆ ಕೊಡುವ ಮನೋಭಾವ ರಾಜಕಾರಣಿಗಳಲ್ಲಿ ಬರಬೇಕಿದೆ ಎಂದರು. ರಾಯಚೂರು ಲೋಕಸಭಾ ಕ್ಷೇತ್ರದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ನಿರಂಜನ ನಾಯಕ ಇದ್ದರು.