ರಾಯಚೂರು: ದಸರಾ ಉತ್ಸವದ ಕೊನೆಯ ದಿನವಾದ ವಿಜಯದಶಮಿಯಂದು ಜಿಲ್ಲಾದ್ಯಂತ ಸಡಗರ ಸಂಭ್ರಮದಿಂದ ನಾಡಹಬ್ಬವನ್ನು ಆಚರಿಸಲಾಯಿತು. ಜಿಲ್ಲೆಯ ವಿವಿಧೆಡೆ ನಾಡದೇವಿಯ ಮೂರ್ತಿ, ಭಾವಚಿತ್ರಗಳನ್ನು ಶನಿವಾರ ಮೆರವಣಿಗೆ ಮಾಡಲಾಯಿತು.
ರಾಯಚೂರು ನಗರಸಭೆಯಿಂದ ದಸರಾ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ನಗರಸಭೆ ಕಚೇರಿ ಆವರಣದಲ್ಲಿ ನಾಡದೇವಿಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ವಿವಿಧ ಕಲಾ ತಂಡಗಳ ಮೂಲಕ ಮಾಣಿಕಪ್ರಭು ದೇವಸ್ಥಾನದ ಹತ್ತಿರವಿರುವ ಬನ್ನಿಮಂಟಪದವರೆಗೆ ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಗರಸಭೆಯಿಂದ ಪ್ರತಿ ವರ್ಷವೂ ನಾಡ ಹಬ್ಬವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಗುತ್ತದೆ. ದಸರಾ ಉತ್ಸವಕ್ಕೆ ಕಲಾ ತಂಡಗಳ ಪ್ರದರ್ಶನ ಮತ್ತಷ್ಟು ಮೆರಗು ತಂದಿದೆ. ನಗರದ ದಸರಾ ಉತ್ಸವವು ಮೈಸೂರು ದಸರಾದಂತೆ ವೈಭವದಿಂದ ಕೂಡಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಶಾಸಕ ಡಾ.ಶಿವರಾಜ್ ಪಾಟೀಲ್, ನಗರಸಭೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಉಪಾಧ್ಯಕ್ಷ ಸಾಜೀದ್ ಸಮೀರ್, ಪೌರಾಯುಕ್ತ ಗುರುಸಿದ್ದಯ್ಯ ಹಿರೆಮಠ, ಸದಸ್ಯರಾದ ಜಯಣ್ಣ, ಜಿಂದಪ್ಪ, ದರೂರ್ ಬಸವರಾಜ, ಶಶಿರಾಜ್ ಪ್ರಮುಖರಾದ ಮಹ್ಮದ್ ಶಾಲಾಂ, ತಿಮ್ಮಾರೆಡ್ಡಿ ಸೇರಿದಂತೆ ಇತರರಿದ್ದರು.