ರಾಯಚೂರು: ಭಾರತೀಯ ಸೇನೆಯಲ್ಲಿ ಗಡಿ ಭದ್ರತಾ ಪಡೆಯ ಡೆಪ್ಯೂಟಿ ಕಮಾಂಡೆಂಟ್ ಆಗಿ 34 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತಾಯ್ನಡಿಗೆ ಮರಳಿದ ರಾಯಚೂರಿನ ನಿವೃತ್ತ ಯೋಧ ವೆಂಕಟೇಶ್ ಇಟಗಿ ಅವರನ್ನು ನಗರದ ರೈಲು ನಿಲ್ದಾಣದಲ್ಲಿ ಮಂಗಳವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಇದೇ ವೇಳೆ ಮಾತನಾಡಿದ ವೆಂಕಟೇಶ, ಕೇಂದ್ರ ಸರ್ಕಾರ ಅಗ್ನಿವೀರ್ ಯೋಜನೆ ಮೂಲಕ ಯುವಕರನ್ನು ಸೇನೆಯಲ್ಲಿ ಭರ್ತಿ ಮಾಡಿಕೊಳ್ಳುತ್ತಿದೆ. ದೈಹಿಕ, ಮಾನಸಿಕ ಆರೋಗ್ಯ ಅಭಿವೃದ್ಧಿ ಮಾಡಿಕೊಂಡು ಸೇನೆಗೆ ಅರ್ಹತೆ ಪಡೆದು ದೇಶಕ್ಕೆ ಸೇವೆ ಸಲ್ಲಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಈ ಭಾಗದ ಯುವಕರು ಸೇನೆಗೆ ಅರ್ಹತೆ ಪಡೆಯಲು ವಿಫಲರಾಗುತ್ತಿದ್ದಾರೆ. ಆರಂಭದಿಂದಲೇ ಆಸಕ್ತಿ ವಹಿಸಬೇಕು. ಆಸಕ್ತ ಯುವಕರು ನನನ್ನು ಭೇಟಿಯಾಗಿ ಮಾರ್ಗದರ್ಶನ, ತರಬೇತಿ ಪಡೆಯಬಹುದು. ಯೋಧರಿಗೆ ಸಮಾಜದಲ್ಲಿ ಸಿಗುವ ಗೌರವ, ಸೇನೆಯಲ್ಲಿ ಒದಗಿ ಬಂದ ಹೆಚ್ಚಿನ ಜವಾಬ್ದಾರಿಗಳು ತುಂಬಾ ಮುಖ್ಯವಾಗುತ್ತವೆ ಎಂದರು.
ರೈಲ್ವೆ ನಿಲ್ದಾಣದಿಂದ ಜಹಿರಾಬಾದ್ ಬಡಾವಣೆವರೆಗೆ ನಗರದ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ತೆರೆದ ವಾಹನದಲ್ಲಿ ವೆಂಕಟೇಶ ಅವರಿಗೆ ಜೈಕಾರ ಹಾಕುತ್ತಾ ಹೂಮಳೆ ಸುರಿಸುತ್ತಾ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ನಗರಸಬೆ ಉಪಾಧ್ಯಕ್ಷ ಸಾಜೀದ್ ಸಮೀರ್, ಪ್ರಮುಖರಾದ ರಾಘವೇಂದ್ರ ಇಟಗಿ ವಿ.ಗೋವಿಂದು, ಪ್ರದೀಪ್ ಕುಮಾರ್ ಎಸ್.ಅನಿಲ್, ಇರ್ಚಿಟ್ ಗೋವಿಂದು ಸೇರಿದಂತೆ ಇತರರಿದ್ದರು.