ಸೇನಾ ನೇಮಕ ರ‌್ಯಾಲಿಗೆ ಸಕಲ ಸಿದ್ಧತೆ

 

ರಾಯಚೂರು: ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಡಿ.11ರಿಂದ 20ರವರೆಗೆ ನಡೆಯುವ ಸೇನಾ ನೇಮಕ ರ‌್ಯಾಲಿಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 37 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದು 10 ದಿನಗಳ ಕಾಲ ರ‌್ಯಾಲಿ ನಡೆಯಲಿದೆ.

ರ‌್ಯಾಲಿಯಲ್ಲಿ ಪಾಲ್ಗೊಳ್ಳಲು ಆನ್‌ಲೈನ್ ಮೂಲಕ ಡಿ.4ರವರೆಗೆ ಹೆಸರು ನೋಂದಣಿ ಮಾಡಿಸಿಕೊಳ್ಳಲು ಅವಕಾಶವಿತ್ತು. ಇದುವರೆಗೆ 37 ಸಾವಿರ ಅಭ್ಯರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದು, ಅದರಲ್ಲಿ 34,492 ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಅವರಲ್ಲಿ ರಾಯಚೂರು ಜಿಲ್ಲೆಯ 1,700 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.

ಬೆಳಗಾವಿ, ಬಾಗಲಕೋಟೆ, ಬಿಜಾಪುರ ಜಿಲ್ಲೆಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. 2017ರಲ್ಲಿ ಕಲಬುರಗಿಯಲ್ಲಿ ಜರುಗಿದ ರ‌್ಯಾಲಿಯಲ್ಲಿ ಜಿಲ್ಲೆಯ 600 ಅಭ್ಯರ್ಥಿಗಳು ಪಾಲ್ಗೊಂಡಿದ್ದರು.

ಕೆಲ ವರ್ಷಗಳ ಹಿಂದೆ ರಾಯಚೂರಿನಲ್ಲಿ ಸೇನಾ ಭರ್ತಿ ರ‌್ಯಾಲಿ ನಡೆದಾಗಲೂ ಜಿಲ್ಲೆಯ ಯುವಕರು ನಿರಾಸಕ್ತಿ ತೋರಿದ್ದರು. ಈ ಬಾರಿಯೂ ನೋಂದಣಿ ಸಂಖ್ಯೆಯಲ್ಲಿ ರಾಯಚೂರು ಜಿಲ್ಲೆ ಕೊನೇ ಸ್ಥಾನದಲ್ಲಿದೆ. ಈ ಭಾಗದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಆಯ್ಕೆಯಾಗಲಿ ಎಂದು ಜಿಲ್ಲೆಯಲ್ಲಿ ಸೇನಾ ಭರ್ತಿ ರ‌್ಯಾಲಿ ನಡೆಸಿದರೂ ಜಿಲ್ಲೆಯ ಯುವಕರಿಂದ ಸ್ಪಂದನೆ ದೊರೆತಿಲ್ಲ.

ವಿವಿ ಆವರಣದಲ್ಲಿ ನೇಮಕ ಪ್ರಕ್ರಿಯೆಗೆ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದ್ದು, ಪ್ರತಿನಿತ್ಯ 4ರಿಂದ 5 ಸಾವಿರ ಯುವಕರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಪರೀಕ್ಷೆ ನಡೆಯಿದೆ. ಇದರಲ್ಲಿ ಆಯ್ಕೆಯಾದವರು ಮುಂದಿನ ಜನವರಿ ಅಥವಾ ಫೆಬ್ರವರಿಯಲ್ಲಿ ಬೆಳಗಾವಿಯಲ್ಲಿ ಲಿಖಿತ ಪರೀಕ್ಷೆ ಬರೆಯಲಿದ್ದಾರೆ.

ಬೆಳಗಿನ ಜಾವ ಯುವಕರು 1,600 ಮೀಟರ್ ಓಟವನ್ನು ಪೂರ್ಣಗೊಳಿಸಬೇಕಾಗಿದ್ದು, ಓಟವನ್ನು 5 ನಿಮಿಷ 30 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದರೆ ಮಾತ್ರ ಮುಂದಿನ ಪರೀಕ್ಷೆಗೆ ಅರ್ಹರಾಗಲಿದ್ದಾರೆ. ಓಟ ಮತ್ತು ಆರೋಗ್ಯ ತಪಾಸಣೆಗೆ ಸಂಬಂಧಿಸಿದಂತೆ ಮೈದಾನದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಬೆಳಗಾವಿ ಸೇರಿ ವಿವಿಧ ಸೇನಾ ವಿಭಾಗಗಳಿಂದ ಅಧಿಕಾರಿಗಳು, ಸಿಬ್ಬಂದಿ ಸೇರಿ ಒಟ್ಟು 100ಕ್ಕೂ ಹೆಚ್ಚು ಸೇನಾ ಸಿಬ್ಬಂದಿ ಆಗಮಿಸಿದ್ದು, ಆವರಣದಲ್ಲೇ ಶೌಚಗೃಹದ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತ ವಿವಿ ಮುಂಭಾಗದ ಪೆಟ್ರೊಲ್‌ಬಂಕ್ ಪಕ್ಕದ ಖಾಲಿ ಜಾಗದಲ್ಲಿ ತಾತ್ಕಾಲಿಕ ಶೌಚಗೃಹಗಳನ್ನು ನಿರ್ಮಾಣ ಮಾಡಿದೆ.

ಅಗತ್ಯ ಸೌಲಭ್ಯ ಕಲ್ಪಿಸಲಿ: ಸೇನಾ ಭರ್ತಿ ರ‌್ಯಾಲಿಯಲ್ಲಿ ಪಾಲ್ಗೊಳ್ಳಲು ವಿವಿಧ ಜಿಲ್ಲೆಗಳಿಂದ ಯವಕರು ಆಗಮಿಸುತ್ತಿದ್ದು, ಕಳೆದ ಬಾರಿಯ ರ‌್ಯಾಲಿ ಸಂದರ್ಭದಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೆ ಯುವಕರು ರಸ್ತೆ ಪಕ್ಕ ಮಲಗಿದ್ದರು. ಊಟಕ್ಕಾಗಿ ಪರದಾಡಿದ ಘಟನೆಗಳು ನಡೆದಿದ್ದವು. ಯುವಕರು ರಾತ್ರಿ ಬಂದು ಆಯ್ಕೆ ಪ್ರಕ್ರಿಯೆ ಮುಗಿಸಿಕೊಂಡು ಹೋಗುವುದರಿಂದ ವಸತಿ ವ್ಯವಸ್ಥೆ ಕಲ್ಪಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸುತ್ತಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಯುವಕರು ಆಗಮಿಸುವುದರಿಂದ ಈ ಬಾರಿಯೂ ವಸತಿ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಈ ಬಗ್ಗೆ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಳ್ಳಬೇಕು ಎನ್ನುವುದು ಅಭ್ಯರ್ಥಿಗಳ ಒತ್ತಾಸೆಯಾಗಿದೆ.

ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಸಲಾಗುತ್ತಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದವರಿಗೆ ಅವಕಾಶ ನೀಡಲಾಗಿದೆ. ಯುವಕರು ಮಧ್ಯವರ್ತಿಗಳ ಮಾತಿಗೆ ಬೆಲೆ ನೀಡದೆ ನೇರವಾಗಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕು.
| ಕರ್ನಲ್ ಪಿ.ದಂಗವಾಲ್ ನಿರ್ದೇಶಕ, ಸೇನಾ ನೇಮಕಾತಿ ವಿಭಾಗ, ಬೆಳಗಾವಿ