ಪಕ್ಷ ವಿರೋಧಿಗಳಿಗೆ ಬೋಸರಾಜು ಆಶ್ರಯ

<ಮಾಜಿ ಶಾಸಕ ಸೈಯದ್ ಯಾಸೀನ್ ಆರೋಪ>

ರಾಯಚೂರು: ಪಕ್ಷ ವಿರೋಧಿ ಚಟುವಟಿಕೆ ನಡೆಸುವ ಮುಖಂಡರಿಗೆ ಆಶ್ರಯ ನೀಡುವುದರ ಜತೆಗೆ ಹಲವು ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲಿಗೆ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಕಾರಣರಾಗಿದ್ದಾರೆ ಎಂದು ಮಾಜಿ ಶಾಸಕ ಸೈಯದ್ ಯಾಸೀನ್ ಹರಿಹಾಯ್ದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನ ಹಾಗೂ ಮಾನ್ವಿಯಲ್ಲಿ ಹಂಪಯ್ಯ ನಾಯಕ, ಸಿಂಧನೂರಿನಲ್ಲಿ ಹಂಪನಗೌಡ ಬಾದರ್ಲಿ ಸೋಲಿಗೆ ಪರೋಕ್ಷವಾಗಿ ಬೋಸರಾಜು ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

ನಾನು ಸ್ಪರ್ಧಿಸಿದ 6 ಚುನಾವಣೆಯಲ್ಲಿ ಬೋಸರಾಜು ಪಕ್ಷ ವಿರೋಧಿ ಕೆಲಸ ಮಾಡುವವರಿಗೆ ಬೆಂಬಲ ನೀಡುತ್ತಾ ಬರುತ್ತಿದ್ದಾರೆ. ಅವರಿಗೆ ಯಾವುದೇ ಸಮುದಾಯದ ಹಿನ್ನೆಲೆಯಿಲ್ಲ. ನನಗೆ ಎಲ್ಲ ಸಮುದಾಯದ ಜನರ ಬೆಂಬಲವಿದ್ದು, ಮತ್ತೊಬ್ಬರ ಬೆಳವಣಿಗೆ ತಡೆಯುವ ಕೆಲಸ ಮಾಡುತ್ತಿದ್ದಾರೆ.

ನಗರಸಭೆ ಚುನಾವಣೆ ಸಂದರ್ಭ ಪಕ್ಷದ ಜಿಲ್ಲಾ ಅಧ್ಯಕ್ಷ ರಾಮಣ್ಣ ಇರಬಗೇರಾ ಅಡ್ಡಗಟ್ಟಿ ಬಿ ಫಾರಂ ನೀಡುವಂತೆ ಒತ್ತಾಯ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವ ಕಾಂಗ್ರೆಸ್ ಅಮಾಯಕ ಪದಾಧಿಕಾರಿಗಳ ಮೇಲೆ ಕೇಸ್ ದಾಖಲಿಸಲಾಗಿದ್ದು, ಬೋಸರಾಜು ಒತ್ತಡ ಹೇರಿ ಇರಬಗೇರಾರಿಂದ ಪ್ರಕರಣ ದಾಖಲಿಸಿದ್ದಾರೆ.

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಮುಖಂಡರಿಗೆ ಎಚ್ಚರಿಕೆ ನೀಡಬೇಕು. ಅವರು ಸುಧಾರಿಸಿಕೊಳ್ಳದಿದ್ದರೆ ಪಕ್ಷದಿಂದ ಹೊರಹಾಕುವ ಕೆಲಸ ಪಕ್ಷದ ವರಿಷ್ಠರು ಮಾಡಬೇಕು. ಈ ಕುರಿತು ಈಗಾಗಲೇ ರಾಜ್ಯ ನಾಯಕರಿಗೆ ದೂರು ನೀಡಲಾಗಿದ್ದು, ಕ್ರಮಕೈಗೊಳ್ಳುವ ಆಶಾಭಾವ ಇದೆ ಎಂದು ಸೈಯದ್ ಯಾಸೀನ್ ಹೇಳಿದರು.

ಈ ಸಂದರ್ಭ ಪಕ್ಷದ ಮುಖಂಡರಾದ ಕೃಷ್ಣಮೂರ್ತಿ, ದೀಪಕ್ ರೆಡ್ಡಿ, ಈರಣ್ಣ ಗೌಡ ಉಪಸ್ಥಿತರಿದ್ದರು.