ರಾಯಚೂರು: ವರ್ಷವಿಡೀ ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರು ವರ್ಷದಲ್ಲಿ ಒಮ್ಮೆ ಕ್ರೀಡಾಕೂಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕ್ರೀಡಾಸ್ಪೂರ್ತಿಯನ್ನು ಪ್ರದರ್ಶಿಸಬೇಕು ಎಂದು ಡಿಸಿ ಕೆ.ನಿತೀಶ ಹೇಳಿದರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿ, ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಮನಸ್ಸಿನ ಮನರಂಜನೆ, ಶಾರೀರಿಕ, ಮಾನಸಿಕ ಆರೋಗ್ಯದ ಜತೆಗೆ ಸಹೋದ್ಯೋಗಿಗಳೊಂದಿಗೆ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಕಂದಾಯ ಹಾಗೂ ಪೊಲೀಸ್ ಇಲಾಖೆ ನಡುವೆ ಕ್ರೀಡಾಕೂಟ ಆಯೋಜಿಸುವ ಕುರಿತು ರ್ಚಿಸಲಾಗುವುದು ಎಂದು ತಿಳಿಸಿದರು.
ಎಸ್ಪಿ ಎಂ.ಪುಟ್ಟಮಾದಯ್ಯ ಮಾತನಾಡಿ, ಪೊಲೀಸರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ, ವ್ಯಾಯಾಮ ಮಾಡುವುದರೊಂದಿಗೆ ಕ್ರೀಡೆಗಳಲ್ಲಿ ಪಾಲ್ಗೊಂಡು ಶಾರೀರಕ ಸಮತೋಲನದ ಕುರಿತು ಗಮನಹರಿಸಬೇಕು ಎಂದು ಹೇಳಿದರು.
ಇದೇ ವೇಳೆ ಜಿಲ್ಲಾ ಪೊಲೀಸ್ ಇಲಾಖೆಯ ವಿಭಾಗವಾರು ಐದು ತಂಡಗಳಾದ ಎಡೆದೊರೆ, ಗಜಪಡೆ, ತುಂಗಭದ್ರಾ, ಕೃಷ್ಣಾ ಮತ್ತು ಶಕ್ತಿಪಡೆಗಳಿಗೆ ಕ್ರೀಡಾಕೂಟದ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
ನಿವೃತ್ತಿ ಹೊಂದಿದ ನೇತಾಜಿನಗರ ಠಾಣೆ ಎಎಸ್‌ಐ ಎಲ್.ಕೆ.ಅಲ್‌ಫ್ರೇಡ್ ಹಾಗೂ ಲಿಂಗಸುಗೂರು ಪಿಎಸ್‌ಐ ಹನುಮಂತಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಎಸ್ಪಿಗಳಾದ ಡಾ.ಆರ್.ಶಿವಕುಮಾರ, ಜಿ.ಹರೀಶ ಸೇರಿದಂತೆ ಇತರರಿದ್ದರು.