ರಾಯಚೂರು: ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಕಾನೂನು ಕ್ರಮ ಜರುಗಿಸುವಂತೆ ಅಂಬೇಡ್ಕರ್ ಸೇನೆಯಿಂದ ನಗರದ ಡಿಸಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಸಂಸತ್ ಚಳಿಗಾಲದ ಅಧಿವೇಶನದಲ್ಲಿ 2 ದಿನಗಳ ಕಾಲ ಸಂವಿಧಾನ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಚರ್ಚೆ ಮಾಡಲು ಅವಕಾಶ ನೀಡಲಾಗಿತ್ತು. ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಷಾ, ಅಂಬೇಡ್ಕರ್ ಎನ್ನುವುದು ಪ್ಯಾಷನ್ ಆಗಿ ಬಿಟ್ಟಿದೆ. ಆ ಹೆಸರಿನ ಬದಲಿಗೆ ದೇವರ ಹೆಸರಿನಲ್ಲಿ ಜಪ ಮಾಡಿದ್ದರೆ ಏಳು ಜನ್ಮಗಳಲ್ಲಿ ಸ್ವರ್ಗ ಸಿಗುತ್ತಿತ್ತು ಎಂದು ಹೇಳುವ ಮೂಲಕ ಅಂಬೇಡ್ಕರ್ ಅವರಿಗೆ ಅಗೌರವ ತೋರಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ದೇಶದ ಸಂವಿಧಾನ ಮತ್ತು ಸಂವಿಧಾನವನ್ನು ರಚಿಸಿದ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಅವರನ್ನು ಕೇಂದ್ರ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಪಟ್ಟಿ, ಪ್ರಮುಖರಾದ ಬಂದೇನವಾಜ್, ಮಹೇಶಕುಮಾರ, ಕುಮಾರಸ್ವಾಮಿ, ತಮ್ಮಣ್ಣ, ಅಂಬಾಜಿರಾವ್, ಮಂಜುನಾಥ, ದೇವೇಂದ್ರ ಕುಮಾರ, ಬಸವ ಅರೋಲಿ, ಶಬ್ಬೀರ್ ಅಲಿ, ವೆಂಕಟೇಶ, ಬಾಹುದ್ದೀನ್, ಅಂಜನ್‌ರೆಡ್ಡಿ, ಕಿರಣ್, ಖಾದರ್, ಗುರುಸ್ವಾಮಿ ಸೇರಿದಂತೆ ಇತರರಿದ್ದರು.