ರಾಯಚೂರು: ಹಸಿರು ಶಾಲು ಹಾಕಿಕೊಂಡ ರೈತರು ಹಾಗೂ ಸಂಘದ ಕಾರ್ಯಕರ್ತರು ಶಾಲಿನ ಗೌರವ ಹಾಗೂ ಘನತೆಯನ್ನು ಉಳಿಸಲು ಮುಂದಾಗಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಹೇಳಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ರೈತರ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.
ರೈತರಿಗೆ ಹಲವು ಸಮಸ್ಯೆಗಳಿದ್ದು, ರೈತರು ಸಂಘಟಿತರಾಗಬೇಕಾಗಿದೆ. ಸಂಘಟನೆಯಿಂದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತವೆ. ಮಾಹಿತಿ ಕೊರತೆಯಿಂದ ಅನ್ನದಾತ ಇಂದು ಸಂಕಷ್ಟಪಡುವಂತಾಗಿದೆ. ಜತೆಗೆ ಕಾರ್ಪೋರೇಟ್ ಅಸ್ತಿತ್ವದಲ್ಲಿ ಕೃಷಿ ವಲಯ ಸೇರಿಕೊಂಡು ಬಿಟ್ಟಿದೆ ಎಂದರು.
ದೆಹಲಿ ರೈತ ಹೂರಾಟ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ರಾಷ್ಟ್ರೀಯ ರೈತ ಮುಖಂಡ ಜಗಜೀತ್ ಸಿಂಗ್ ದಲೈವಾಲ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಬೆಂಗಳೂರಿನಲ್ಲಿ ಡಿ.6 ರಿಂದ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ ಎಂದರು.
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೆ ತರಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಆಗಬೇಕು. 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಫಸಲ್ ಭೀಮಾ ಬೆಳೆ ವಿಮೆ ಯೋಜನೆಯಡಿ ರೈತರಿಗಾಗುತ್ತಿರುವ ಮೋಸವನ್ನು ತಪ್ಪಿಸಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ವಿ.ಕೆ ಮುಖ್ಯಸ್ಥ ಹನುಮಂತಪ್ಪ ಶ್ರೀಹರಿ, ಸಂಘದ ಜಿಲ್ಲಾ ಗೌರವಾಧ್ಯಕ್ಷ ಸತ್ಯಾರೆಡ್ಡಿ, ಜಿಲ್ಲಾಧ್ಯಕ್ಷ ಶಿವಾರ್ಜುನ ನಾಯಕ, ಪ್ರಮುಖರಾದ ತಾಯಪ್ಪ ಶಿವಂಗಿ, ಸಂಗಮೇಶ, ಭೀಮರಾಯ, ರಂಗಸ್ವಾಮಿ, ರಾಮ್‌ರಹೀಮ್, ಹನುಮೇಶ, ಕುಪ್ಪೇಶ, ಮಹೇಶ, ಬಸವರಾಜ, ವೆಂಕಟೇಶ, ವಿರೂಪಾಕ್ಷಿ, ಅಮರೇಶ ಹರವಿ ಸೇರಿದಂತೆ ಇತರರಿದ್ದರು.