ರಾಯಚೂರು ಕೃಷಿ ವಿಜ್ಞಾನ ವಿವಿ ಘಟಿಕೋತ್ಸವ ಜೂ.26ಕ್ಕೆ – ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಹೇಳಿಕೆ

ರಾಯಚೂರು: ನಗರದ ಕೃಷಿ ವಿಜ್ಞಾನ ವಿವಿಯ ಪ್ರೇಕ್ಷಾಗೃಹದಲ್ಲಿ ಜೂ.26ರ ಬೆಳಗ್ಗೆ 11ಕ್ಕೆ ಕೃಷಿ ವಿಜ್ಞಾನ ವಿವಿಯ 9ನೇ ಘಟಿಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ವಿಜ್ಞಾನ ವಿವಿಯ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ತಿಳಿಸಿದರು.

ಘಟಿಕೋತ್ಸವದಲ್ಲಿ 270 ಸ್ನಾತಕ, 164 ಸ್ನಾತಕೋತ್ತರ ಹಾಗೂ 24 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು. ಸ್ನಾತಕ ಪದವಿಯಲ್ಲಿ 19 ಚಿನ್ನದ ಪದಕ, ಸ್ನಾತಕೋತ್ತರ ಪದವಿಗಳಲ್ಲಿ 16 ಚಿನ್ನದ ಪದಕ, ಡಾಕ್ಟರೇಟ್ ವಿದ್ಯಾರ್ಥಿಗಳಿಗೆ 5 ಚಿನ್ನದ ಪದಕ ಪ್ರದಾನ ಮಾಡಲಾಗುವುದು ಎಂದು ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

2017-18ನೇ ಸಾಲಿನಲ್ಲಿ ವಿವಿಯ ವಿಜ್ಞಾನಿಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಮಾರು 352 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಕನ್ನಡದಲ್ಲಿ ವಿವಿಧ ತಂತ್ರಜ್ಞಾನಗಳ ಕುರಿತು 86 ಕಿರು ಮಾಹಿತಿ ಪ್ರಕಟಣೆ ಮತ್ತು ತಂತ್ರಜ್ಞಾನ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ರೈತರಿಗೆ ತಿಳಿವಳಿಕೆ ನೀಡಲು ಬೆಳೆ ಉತ್ಪಾದಕತೆ, ಬೆಳೆ ಸಂರಕ್ಷಣೆ ಮತ್ತು ಕೃಷಿ ಯಾಂತ್ರೀಕರಣ ಸಂಬಂಧ ವಿವಿಧ ತಂತ್ರಜ್ಞಾನಗಳನ್ನು ಬಿಡುಗಡೆ ಮಾಡಲಾಗಿದೆ. ಹಿಂಗಾರು ಜೋಳ ಜಿಎಸ್-23, ಮೆಕ್ಕೆಜೋಳ ಆರ್‌ಸಿಆರ್‌ಎಂಎಚ್-2 ಮತ್ತು ನವಣೆ ಎಚ್‌ಎನ್-46 ಬೆಳೆಗಳಲ್ಲಿ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ನೀಡಲಾಗಿದೆ. ಸೇಂಗಾ ಬೆಳೆಯಲ್ಲಿ ಕೆಡಿಜಿ-128 ಎಂಬ ತಳಿ ಅಳವಡಿಕೆ ಮಾಡಿಕೊಂಡಿದೆ. ಬೆಳೆ ಉತ್ಪಾದನೆಯಲ್ಲಿ 8 ಮತ್ತು ಬೆಳೆ ಸಂರಕ್ಷಣೆಯಲ್ಲಿ 12 ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ವಿವಿಧ ಸಂಶೋಧನೆ ಯೋಜನೆಗಳಲ್ಲಿ ಒಟ್ಟು 26.26 ಕೋಟಿ ರೂ. ಧನ ಸಹಾಯ ವಿವಿಗೆ ದೊರೆತಿದೆ ಎಂದರು.

ರಾಷ್ಟ್ರೀಯ ಮಳೆಯಾಶ್ರಿತ ಕ್ಷೇತ್ರ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶೋಕ ದಳವಾಯಿ ಅತಿಥಿಗಳಾಗಿ ಭಾಗವಹಿಸಲಿದ್ದು, ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅಧ್ಯಕ್ಷತೆ ವಹಿಸುವರು ಎಂದರು. ಈ ಸಂದರ್ಭ ವಿವಿಧ ವಿಭಾಗದ ನಿರ್ದೇಶಕರಾದ ಡಾ.ಎಸ್.ಕೆ.ಮೇಟಿ, ಡಾ.ಎಂ.ಜಿ.ಪಾಟೀಲ್, ಡಾ.ಬಿ.ಕೆ.ದೇಸಾಯಿ, ಡಾ.ಬಿ.ಎಂ.ಚಿತ್ತಾಪುರ, ಡಾ.ಐ.ಶಂಕರಗೌಡ, ಡಾ.ಎಂ.ವೀರನಗೌಡ, ಡಾ.ಎಂ.ಭೀಮಣ್ಣ, ಡಾ.ಪ್ರಮೋದಕಟ್ಟಿ ಇದ್ದರು.

Leave a Reply

Your email address will not be published. Required fields are marked *