ಮೇ 23ರ ನಂತರ ರಾಜ್ಯ ರಾಜಕೀಯದಲ್ಲಿ ಧ್ರುವೀಕರಣ – ವಿ.ಸೋಮಣ್ಣ

ರಾಯಚೂರು: ಮೇ 23ರ ನಂತರದಲ್ಲಿ ರಾಜ್ಯ ರಾಜಕೀಯದಲ್ಲಿ ಧ್ರುವೀಕರಣವಾಗಲಿದ್ದು, ಕಿತ್ತಾಟದಲ್ಲಿ ಮಧ್ಯಂತರ ಚುನಾವಣೆ ನಡೆಯುವುದನ್ನು ಅಲ್ಲಗೆಳೆಯುವಂತಿಲ್ಲ ಎಂದು ಶಾಸಕ ವಿ.ಸೋಮಣ್ಣ ಹೇಳಿದರು.

ಸ್ಥಳೀಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಲೋಕಸಭೆ ಚುನಾವಣೆಯ ಮತದಾನ ಮುಗಿದ ನಂತರದಲ್ಲಿ ರಾಜ್ಯದ ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳಲ್ಲಿ ಕಿತ್ತಾಟ ಹೆಚ್ಚಾಗಲಿದ್ದು, ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಸರ್ಕಾರ ಪತನಗೊಳ್ಳಲಿದೆ. ಕೈ-ತೆನೆ ನಾಯಕರ ಭಿನ್ನಮತ ಸ್ಫೋಟಗೊಳ್ಳಲಿದೆ. ಇದರಿಂದ ಬೇಸರಗೊಂಡು ಸಿಎಂ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದರು.

ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪರಾಭವಗೊಳ್ಳಲಿದ್ದು, ಅದು ಸರ್ಕಾರದ ಪತನಕ್ಕೆ ಕಾರಣವಾಗಲಿದೆ. ಈಗಾಗಲೇ ಚುನಾವಣೆಯಲ್ಲಿ ಎರಡು ಪಕ್ಷಗಳ ನಡುವೆ ಹೊಂದಾಣಿಕೆ ಕೊರತೆ ಎದ್ದು ಕಾಣುತ್ತಿದೆ. ಚುನಾವಣೆ ನಂತರ ಮತ್ತಷ್ಟು ಹೆಚ್ಚಾಗಲಿದೆ ಎಂದರು.

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಘಟಾನುಘಟಿಗಳನ್ನು ಪ್ರಚಾರದ ವೇಳೆ ಸಮರ್ಥವಾಗಿ ಎದುರಿಸಿದ್ದು, ಮುಂದಿನ ಪೀಳಿಗೆಗೆ ದಿಕ್ಸೂಚಿಯಾಗಲಿದೆ. ರಾಜ್ಯದಲ್ಲಿ ಜರುಗಿದ ಮೊದಲ ಹಂತದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಮತದಾರರು ಅಚ್ಚರಿಯ ಫಲಿತಾಂಶ ನೀಡಲಿದ್ದಾರೆ. ಪ್ರಧಾನಿ ಮೋದಿ ಅಲೆ ಕೆಲಸ ಮಾಡಲಿದ್ದು, ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನರು ಕುಡಿವ ನೀರು ಸೇರಿ ಹಲವು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದ್ದು, ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿಯಿಲ್ಲ. ಬರದಿಂದ ರೈತರು, ಕೂಲಿ ಕಾರ್ಮಿಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎಂದು ವಿ.ಸೋಮಣ್ಣ ಹೇಳಿದರು. ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಜೆ.ಶರಣಪ್ಪಗೌಡ, ಮುಖಂಡರಾದ ಬಸನಗೌಡ ಬ್ಯಾಗವಾಟ್, ಗಂಗಾಧರ ನಾಯಕ, ತ್ರಿವಿಕ್ರಮ ಜೋಷಿ, ಕೊಟ್ರೇಶಪ್ಪ ಕೋರಿ, ಚಂದ್ರಶೇಖರ್ ಉಪಸ್ಥಿತರಿದ್ದರು.

ಬರ ಸ್ಥಿತಿ ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಸಿಎಂ ಎಚ್.ಡಿ.ಕುಮಾರಸ್ವಾಮಿ ಮುಖ್ಯಕಾರ್ಯದರ್ಶಿ ಜತೆ ಸಮಾಲೋಚನೆ ನಡೆಸಿ ಬರ ನಿರ್ವಹಣೆಗೆ ಸಂಬಂಧಿಸಿದಂತೆ ಸೂಚನೆ ನೀಡಿಲ್ಲ. ಸಿಎಂ ಸೇರಿ ಸಚಿವರು ಚುನಾವಣೆ ಪ್ರಚಾರದಲ್ಲಿ ಮುಳುಗಿದ್ದರಿಂದ ಯಾವುದೇ ಕೆಲಸಗಳು ಆಗುತ್ತಿಲ್ಲ.
| ವಿ.ಸೋಮಣ್ಣ ಶಾಸಕ, ಗೋವಿಂದರಾಜನಗರ ಕ್ಷೇತ್ರ

Leave a Reply

Your email address will not be published. Required fields are marked *