ರೋಹಿತ್ ಟೆಸ್ಟ್ ಆರಂಭಿಕ?

ನವದೆಹಲಿ: ಏಕದಿನ-ಟಿ20 ಕ್ರಿಕೆಟ್​ನಲ್ಲಿ ಆರಂಭಿಕ ಆಗಿ ಬಡ್ತಿ ಪಡೆದ ಬಳಿಕ ಸಾಕಷ್ಟು ರನ್​ಪ್ರವಾಹ ಹರಿಸಿರುವ ಮುಂಬೈ ಬ್ಯಾಟ್ಸ್​ಮನ್ ರೋಹಿತ್ ಶರ್ಮಗೆ ಟೆಸ್ಟ್ ತಂಡದಲ್ಲೂ ಆರಂಭಿಕನ ಸ್ಥಾನ ನೀಡಲು ಭಾರತೀಯ ಟೀಮ್ ಮ್ಯಾನೇಜ್​ವೆುಂಟ್ ಚಿಂತಿಸಿದೆ.

ತಂಡದ ಹಾಲಿ ಆರಂಭಿಕರಾಗಿರುವ ಕನ್ನಡಿಗ ಕೆಎಲ್ ರಾಹುಲ್ ಕಳೆದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ತೋರಿರುವ ಕಳಪೆ ನಿರ್ವಹಣೆ ತೋರಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್ ಈ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಸೀಮಿತ ಓವರ್ ತಂಡದ ಉಪನಾಯಕ ರೋಹಿತ್ ಶರ್ಮ ಕಳೆದ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಆಗಿ ಟೆಸ್ಟ್ ತಂಡದಲ್ಲಿದ್ದರೂ, ಆಡುವ ಅವಕಾಶ ಪಡೆದಿರಲಿಲ್ಲ. ಅಜಿಂಕ್ಯ ರಹಾನೆ ಮತ್ತು ಹನುಮ ವಿಹಾರಿ ವಿಂಡೀಸ್​ನಲ್ಲಿ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ನಿರ್ವಹಣೆ ತೋರಿರುವುದರಿಂದ ಸದ್ಯಕ್ಕೆ ರೋಹಿತ್​ಗೆ ಈ ಕ್ರಮಾಂಕದಲ್ಲಿ ಅವಕಾಶ ಸಿಗುವ ನಿರೀಕ್ಷೆಯೂ ಇಲ್ಲ. ಹೀಗಾಗಿ ಸೀಮಿತ ಓವರ್ ಕ್ರಿಕೆಟ್​ನ ಅವರ ಅನುಭವವನ್ನು ಟೆಸ್ಟ್ ಆರಂಭಿಕರಾಗಿ ಬಳಸಿಕೊಳ್ಳಲು ಆಲೋಚಿಸಲಾಗುತ್ತಿದೆ.

‘ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ಆಯ್ಕೆ ಸಮಿತಿ ಇನ್ನೂ ಸಭೆ ಸೇರಿಲ್ಲ. ಮುಂದಿನ ಬಾರಿ ಸಭೆ ಸೇರಿದಾಗ ರೋಹಿತ್ ಅವರನ್ನು ಟೆಸ್ಟ್ ತಂಡದ ಆರಂಭಿಕನ ಸ್ಥಾನಕ್ಕೆ ಖಂಡಿತವಾಗಿಯೂ ಪರಿಗಣಿಸಲಿದ್ದೇವೆ’ ಎಂದು ಎಂಎಸ್​ಕೆ ಪ್ರಸಾದ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

‘ಕೆಎಲ್ ರಾಹುಲ್​ರಲ್ಲಿ ಉತ್ತಮ ಪ್ರತಿಭೆ ಇದೆ. ಆದರೆ ಟೆಸ್ಟ್ ಕ್ರಿಕೆಟ್​ನಲ್ಲಿ ಅವರೀಗ ಕಠಿಣ ಸಮಯ ಎದುರಿಸುತ್ತಿದ್ದಾರೆ. ಅವರ ಫಾಮ್ರ್ ಬಗ್ಗೆ ನಾವು ಕಳವಳಗೊಂಡಿದ್ದೇವೆ. ಅವರು ಕ್ರೀಸ್​ನಲ್ಲಿ ಹೆಚ್ಚಿನ ಸಮಯ ಕಳೆದು ಲಯ ಕಂಡುಕೊಳ್ಳಬೇಕಾದ ಅಗತ್ಯವಿದೆ’ ಎಂದು ಎಂಎಸ್​ಕೆ ಹೇಳಿದ್ದಾರೆ. ವಿಂಡೀಸ್ ಪ್ರವಾಸದ 4 ಇನಿಂಗ್ಸ್ಗಳಲ್ಲಿ ರಾಹುಲ್ 13, 6, 44 ಮತ್ತು 38 ರನ್ ಗಳಿಸಿದ್ದರು.

ಎಲ್ಲವೂ ಅಂದುಕೊಂಡಂತೆ ನಡೆದರೆ ರೋಹಿತ್ ಶರ್ಮ ಮುಂಬರುವ ದಕ್ಷಿಣ ಆಫ್ರಿಕಾ ಸರಣಿಯಿಂದಲೇ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಅ. 2ರಿಂದ ಈ ಸರಣಿ ನಡೆಯಲಿದೆ.

ಭಿನ್ನ ಅಭಿಪ್ರಾಯಗಳು ಭಿನ್ನಮತವಲ್ಲ!

ಭಿನ್ನ ಅಭಿಪ್ರಾಯಗಳನ್ನು ಭಿನ್ನಮತವೆಂದು ಪರಿಗಣಿಸಬಾರದು ಎನ್ನುವ ಮೂಲಕ ಭಾರತ ತಂಡದ ಕೋಚ್ ರವಿಶಾಸ್ತ್ರಿ, ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ನಡುವೆ ಒಡಕು ಇದೆ ಎಂಬ ಊಹಾಪೋಹವನ್ನು ತಳ್ಳಿಹಾಕಿದ್ದಾರೆ. ‘15 ಆಟಗಾರರು ಇರುವ ತಂಡದಲ್ಲಿ ಕೆಲವೊಮ್ಮೆ ಭಿನ್ನವಾದ ಅಭಿಪ್ರಾಯಗಳು ವ್ಯಕ್ತವಾಗುವುದು ಸಹಜ. ಅದು ಅಗತ್ಯ ಕೂಡ. ಯಾಕೆಂದರೆ ಎಲ್ಲರೂ ಒಂದೇ ರೀತಿ ಯೋಚಿಸುವುದನ್ನು ನಾನು ಇಷ್ಟಪಡುವುದಿಲ್ಲ. ಹಲವು ರೀತಿಯ ಅಭಿಪ್ರಾಯಗಳನ್ನು ಆಲಿಸಿದ ಬಳಿಕ ಅತ್ಯುತ್ತಮವಾದುದನ್ನು ಆರಿಸಬೇಕಾಗುತ್ತದೆ’ ಎಂದು ರವಿಶಾಸ್ತ್ರಿ ತಿಳಿಸಿದ್ದಾರೆ.

ಕುಲ್-ಚಾ ಕಡೆಗಣನೆ ಇಲ್ಲ

ಕುಲ್-ಚಾ ಖ್ಯಾತಿಯ ರಿಸ್ಟ್ ಸ್ಪಿನ್ ಜೋಡಿಯಾದ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಕಳೆದ ವೆಸ್ಟ್ ಇಂಡೀಸ್ ಪ್ರವಾಸ ಮತ್ತು ಮುಂದಿನ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿಲ್ಲ. ಆದರೆ ಅವರಿಬ್ಬರು ಮುಂದಿನ ಟಿ20 ವಿಶ್ವಕಪ್ ತಂಡದ ಯೋಜನೆಯಲ್ಲಿ ಇರುತ್ತಾರೆ ಎಂದು ಎಂಎಸ್ಕೆ ಸ್ಪಷ್ಟಪಡಿಸಿದ್ದಾರೆ. ‘ಸ್ಪಿನ್ ವಿಭಾಗಕ್ಕೆ ವೈವಿಧ್ಯತೆ ತರಲು ಪ್ರಯತ್ನಿಸಲಾಗುತ್ತಿದೆ. ಟಿ20 ವಿಶ್ವಕಪ್​ಗೆ ಮುನ್ನ ಕೆಲ ಯುವಕರಿಗೆ ಅವಕಾಶ ನೀಡಲಾಗುತ್ತಿದೆ. ಚಾಹಲ್-ಕುಲದೀಪ್ ಕಳೆದೆರಡು ವರ್ಷಗಳಿಂದ ಅಮೋಘ ನಿರ್ವಹಣೆಯನ್ನೇ ತೋರುತ್ತಿದ್ದಾರೆ. ಅವರಿಬ್ಬರು ಖಂಡಿತವಾಗಿಯೂ ರೇಸ್​ನಲ್ಲಿರುತ್ತಾರೆ. ಆದರೆ ನಾವು ಇತರ ಆಯ್ಕೆಗಳನ್ನೂ ಪ್ರಯತ್ನಿಸಲೇಬೇಕು’ ಎಂದು ಎಂಎಸ್​ಕೆ ವಿವರಿಸಿದ್ದಾರೆ. ವಿಂಡೀಸ್, ಆಫ್ರಿಕಾ ಸರಣಿಗೆ ಯುವ ಸ್ಪಿನ್ನರ್​ಗಳಾದ ರಾಹುಲ್ ಚಹರ್ ಮತ್ತು ವಾಷಿಂಗ್ಟನ್ ಸುಂದರ್ ಸ್ಥಾನ ಪಡೆದಿದ್ದಾರೆ.

ಗಂಗೂಲಿ, ಲಕ್ಷ್ಮಣ್ ಒತ್ತಾಯಿಸಿದ್ದರು

ರೋಹಿತ್ ಶರ್ಮರನ್ನು ಟೆಸ್ಟ್​ನಲ್ಲೂ ಆರಂಭಿಕರನ್ನಾಗಿ ಆಡಿಸುವ ಬಗ್ಗೆ ಮೊದಲು ಅಭಿಪ್ರಾಯ ಮಂಡಿಸಿದವರು ಮಾಜಿ ನಾಯಕ ಸೌರವ್ ಗಂಗೂಲಿ. ಹಿಂದೆ ವೀರೇಂದ್ರ ಸೆಹ್ವಾಗ್​ರನ್ನು ಟೆಸ್ಟ್ ಆರಂಭಿಕರನ್ನಾಗಿ ಆಡಿಸಿ ಯಶ ಕಂಡಿದ್ದ ಗಂಗೂಲಿ, ‘ರೋಹಿತ್​ರನ್ನು ಯಾವುದೇ ತಂಡದಿಂದ ಹೊರಗಿಡುವುದು ಸರಿಯಲ್ಲ. ಅತ್ಯುತ್ತಮ ವಿಶ್ವಕಪ್ ನಿರ್ವಹಣೆಯ ಬಳಿಕ ಅವರು ಟೆಸ್ಟ್​ನಲ್ಲೂ ಅವಕಾಶ ಬಾಚಿಕೊಳ್ಳುವ ಹಂಬಲದಲ್ಲಿದ್ದಾರೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ಇಲ್ಲದಿರುವುದರಿಂದ ಆರಂಭಿಕರನ್ನಾಗಿ ಆಡಿಸಬಹುದು’ ಎಂದಿದ್ದರು. ಬಳಿಕ ವಿವಿಎಸ್ ಲಕ್ಷ್ಮಣ್ ಮತ್ತು ಗೌತಮ್ ಗಂಭೀರ್ ಕೂಡ ರೋಹಿತ್​ಗೆ ಟೆಸ್ಟ್ ನಲ್ಲೂ ಆರಂಭಿಕರಾಗಿ ಅವಕಾಶ ನೀಡುವುದು ಉತ್ತಮ ಉಪಾಯ ಎಂದಿದ್ದರು. ಎಡಗೈ ಆರಂಭಿಕ ಶಿಖರ್ ಧವನ್​ಗೆ ಈಗಾಗಲೆ ಟೆಸ್ಟ್ ತಂಡದ ಬಾಗಿಲು ಬಹುತೇಕ ಮುಚ್ಚಿ ಹೋಗಿದೆ.

Leave a Reply

Your email address will not be published. Required fields are marked *