ಬಿಸಿಲ ನಾಡಲ್ಲಿ ರಾಗಾ `ರಣ’ಕಹಳೆ

ವಾದಿರಾಜ ವ್ಯಾಸಮುದ್ರ ಕಲಬುರಗಿ
ಮಹಾ ಸಮರಕ್ಕೆ ಮುಹೂರ್ತ ಫಿಕ್ಸ್ ಆಗುತ್ತಲೇ ಮತ್ತೊಮ್ಮೆ ಕಲಬುರಗಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಹೋರಾಟ ನಡೆಸಿರುವ ಕಾಂಗ್ರೆಸ್ ಪಕ್ಷ ಮೈ ಕೊಡವಿಕೊಂಡು ಎದ್ದಿದೆ.
ದೇಶದ ಗಮನ ಸೆಳೆದಿರುವ ಕಲಬುರಗಿ ಮೀಸಲು ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಪರ ಯುದ್ಧ ಸಾರಿದ್ದು, ಇದಕ್ಕೆ ಪ್ರತಿಯಾಗಿ ಬಿಸಿಲ ನಾಡಿನಿಂದಲೇ ಕಾಂಗ್ರೆಸ್ ರಣಕಹಳೆ ಊದಲು 18ರಂದು ರಾಹುಲ್ ಗಾಂಧಿ ಬರುತ್ತಿದ್ದಾರೆ. ಇದಕ್ಕಾಗಿ ಎನ್.ವಿ ಮೈದಾನ ಸಿದ್ಧವಾಗುತ್ತಿದೆ.
ಕಲಬುರಗಿ ಮೀಸಲು ಕ್ಷೇತ್ರವಾದ ನಂತರ ಇದು ಮೂರನೇ ಚುನಾವಣೆ. ಕಳೆದೆರಡು ಬಾರಿ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಮಾಜಿ ಸಚಿವ ಮತ್ತು ಬಿಜೆಪಿ ಅಭ್ಯರ್ಥಿ ರೇವೂ ನಾಯಕ್ ಬೆಳಮಗಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಬಾರಿ ಹ್ಯಾಟ್ರಿಕ್ ಗೆಲುವಿಗೆ ತಮ್ಮ ಖದರ್ ತೋರಿಸುತ್ತಿದ್ದಾರೆ.
ಅಭಿವೃದ್ಧಿ ಕಾರ್ಯಗಳಲ್ಲಿ ಖರ್ಗೆ ಅವರನ್ನು ಹಿಮ್ಮೆಟ್ಟಿದ ನಾಯಕರ ಕೊರತೆ ನಮ್ಮಲ್ಲಿದೆ. ಆದರೂ ಈಗ ಕಾಲ ಬದಲಾಗಿದೆ. ಕೈ ಪಕ್ಷದ ಗರಡಿಯಲ್ಲಿ ಬೆಳೆದ ಡಾ. ಉಮೇಶ ಜಾಧವ ಬಿಜೆಪಿಯಿಂದ ಕಣಕ್ಕಿಳಿದು ತೊಡೆ ತಟ್ಟಲು ಸಜ್ಜಾಗಿದ್ದಾರೆ.
ಖರ್ಗೆ ವಿರುದ್ಧ ಯಾರೇ ನಿಂತರೂ ಗೆಲವು ಕಠಿಣ ಎಂಬುದು ಕಾಂಗ್ರೆಸ್ ಲೆಕ್ಕಾಚಾರ. ಆದರೂ ಈ ಸಲ ಅವರಿಗೂ ಅಳಕು ಕಾಣುತ್ತಿದೆ. ಸಮರಕ್ಕೆ ಸಿದ್ಧವಾದ ಬಿಜೆಪಿ ಕಲಬುರಗಿ ಕ್ಷೇತ್ರದ ಎಲ್ಲ ಕಡೆ ಸಭೆಗಳನ್ನು ಮಾಡಿ ಕಾರ್ಯಕರ್ತರನ್ನು ಸಂಘಟಿಸಿದೆ. 2009 ಮತ್ತು 2014ರಲ್ಲಿ ಖರ್ಗೆ ಪರ ಕೆಲಸ ಮಾಡಿದ್ದ ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ ಮತ್ತು ಬಾಬುರಾವ್ ಚಿಂಚನಸೂರ ಅವರಂಥ ಹಿರಿಯ ಕಾಂಗ್ರೆಸ್ ನಾಯಕರು ಈಗ ಅವರ ವಿರುದ್ಧ ತೊಡೆ ತಟ್ಟಿರುವುದು ಕಾಂಗ್ರೆಸ್ಸಿಗೆ ತಲೆನೋವಾಗಿದೆ.
ಇಂತದರಲ್ಲಿಯೂ ಕಲಬುರಗಿ ಕ್ಷೇತ್ರವನ್ನು ಕಾಂಗ್ರೆಸ್ಸಿಗೆ ತಂದುಕೊಡಲೇಬೇಕೆಂದು ಹೊರಟಿರುವ ನಾಯಕರಿಗೆ ರಾಹುಲ್ ಭೇಟಿ ಸಂತಸ ತಂದಿದೆ. ದಿ. ಇಂದಿರಾಗಾಂಧಿಯಿಂದ ಹಿಡಿದು ರಾಹುಲ್ ಗಾಂಧಿವರೆಗೆ ಕಾಂಗ್ರೆಸ್ಸಿನಲ್ಲಿಯೇ ಇರುವ ಖರ್ಗೆ ಪಕ್ಷಕ್ಕಾಗಿ ದುಡಿದವರಿದ್ದಾರೆ. ವಯಸ್ಸು ಮತ್ತು ರಾಜಕೀಯದಲ್ಲಿ ರಾಹುಲ್ಗಿಂತ ಸಾಕಷ್ಟು ವರ್ಷ ಹಿರಿಯರು ಮತ್ತು ಅನುಭವಿ. ಗಾಂಧಿ ಮನೆತನದ ಕುಡಿ ರಾಹುಲ್ ಆಗಿರುವುದೊಂದೇ ಈಗಿನ ಮಹತ್ವದ ಅಂಶ. ಅಲ್ಲದೇ ಸಂವಿಧಾನದ 371ನೇ ವಿದಿ ಜಾರಿಗೆ ತಂದ ಕೀರ್ತಿ ಕಾಂಗ್ರೆಸ್ ತನ್ನದಾಗಿರಿಸಿಕೊಂಡಿದೆ. ಇದು ಖರ್ಗೆಯವರಿಗೆ ಪ್ಲಸ್ ಪಾಯಿಂಟ್.
ರಾಹುಲ್ ಪ್ರವಾಸ ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯಪುರ ಲೋಕಸಭಾ ಕ್ಷೇತ್ರಗಳ ಮೇಲೆ ಪರಿಣಾಮ ಬೀರಲಿದೆ. ಈಗ ಸಧ್ಯಕ್ಕೆ ಬೀದರ್, ಕೊಪ್ಪಳ, ಮತ್ತು ವಿಜಯಪುರ ಬಿಜೆಪಿ ಹಿಡಿತದಲ್ಲಿವೆ. ಕಲಬುರಗಿ, ರಾಯಚೂರು ಮತ್ತು ಮರುಚುನಾವಣೆ ನಡೆದ ನಂತರ ಬಳ್ಳಾರಿ ಕಾಂಗ್ರೆಸ್ ಹಿಡಿತದಲ್ಲಿವೆ.
ಜನತೆ ಕಾಂಗ್ರೆಸ್ನ್ನು ಮೆಚ್ಚಿಕೊಳ್ಳುತ್ತಿದ್ದಾರೆ ಎನ್ನುವುದು ಕೈ ನಾಯಕರ ವಿಶ್ವಾಸ. ರಾಹುಲ್ ಪ್ರವಾಸ ಪಕ್ಷದ ಕಾರ್ಯಕರ್ತರ ಸಂಘಟನೆಗೆ ಶಕ್ತಿ ತುಂಬಬಲ್ಲದು, ಈ ಶಕ್ತಿಯಿಂದಾಗಿ ಕಾಂಗ್ರೆಸ್ ಹೈ-ಕದ ಎಲ್ಲ ಐದು ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿದೆ. ರಾಹುಲ್ ಪ್ರವಾಸವನ್ನು ಸಂಪೂರ್ಣವಾಗಿ ರಾಜಕೀಯ ಲಾಭಕ್ಕೆ ಪಡೆದುಕೊಳ್ಳಲು ಕಾಂಗ್ರೆಸ್ ನಿರ್ಧರಿಸಿ ಅದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅಂತೆಯೇ ರಾಹುಲ್-ಮೋದಿ ಕಾಳಗಕ್ಕೆ ಬಿಸಿಲ ನಾಡಿನ ಎಲ್ಲ ಕ್ಷೇತ್ರಗಳು ವೇದಿಕೆಯಾಗಲಿವೆ.

ರಾಹುಲ್ ಕಾರ್ಯಕ್ರಮಕ್ಕೆ ಏನಿಲ್ಲವೆಂದರೂ ಒಂದು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಕಾಂಗ್ರೆಸ್ ತತ್ವ-ಸಿದ್ಧಾಂತ ಮತ್ತು ಮಲ್ಲಿಕಾರ್ಜುನ ಖರ್ಗೆ ಅಭಿವೃದ್ದಿ ಕಾರ್ಯಗಳ ಬಗ್ಗೆ ವಿಶ್ವಾಸ ಇರಿಸಿಕೊಂಡಿರುವ ಯಾರೇ ಕಾಂಗ್ರೆಸ್ಸಿಗೆ ಬಂದರೂ ನಾವು ಸ್ವಾಗತಿಸುತ್ತೇವೆ. ರಾಹುಲ್ ಕಾರ್ಯಕ್ರಮ ಯಶಸ್ಸಿಗೆ ಈಗ ನಮ್ಮ ಶ್ರಮ ಹಾಕುತ್ತಿದ್ದೇವೆ.
|ಜಗದೇವ ಗುತ್ತೇದಾರ
ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ, ಕಲಬುರಗಿ.