ಎಲ್ಲ ರಾಜ್ಯಗಳ ಕಾಂಗ್ರೆಸ್​ ಮುಖ್ಯಸ್ಥರ ಜತೆ ಇಂದು ರಾಹುಲ್​ ಗಾಂಧಿ ಮಾತುಕತೆ

ಲೋಕಸಮರಕ್ಕೆ ರಣತಂತ್ರ ರೂಪಿಸುವ ಉದ್ದೇಶ

ನವದೆಹಲಿ: ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್​ ಸೇರಿ ಎಲ್ಲ ರಾಜಕೀಯ ಪಕ್ಷಗಳು 2019ರ ಲೋಕಸಭೆ ಚುನಾವಣೆಗೆ ಸಿದ್ಧತೆಗಳನ್ನು ಆರಂಭಿಸಿವೆ. ತಮ್ಮದೇ ಆದ ಮಟ್ಟದಲ್ಲಿ ಚುನಾವಣಾ ಪ್ರಚಾರ ಕಾರ್ಯವನ್ನೂ ಕೈಗೊಳ್ಳುತ್ತಿವೆ. ಇದಕ್ಕೆ ಪೂರಕವಾಗಿ ಲೋಕಸಮರದ ರಣತಂತ್ರ ರೂಪಿಸಲು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಎಲ್ಲ ರಾಜ್ಯಗಳ ಕಾಂಗ್ರೆಸ್​ ಅಧ್ಯಕ್ಷರು ಮತ್ತು ಶಾಸಕಾಂಗ ಪಕ್ಷದ ನಾಯಕರ ಜತೆ ಶನಿವಾರ ಸಭೆ ನಡೆಸಲಿದ್ದಾರೆ.


ಎರಡು ದಿನಗಳ ಹಿಂದಷ್ಟೇ ರಾಹುಲ್​ ಗಾಂಧಿ ಇತ್ತೀಚೆಗೆ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕಗೊಂಡವರ ಜತೆ ಸಭೆ ನಡೆಸಿದ್ದರು. ರಾಹುಲ್​ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಕೂಡ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಪಕ್ಷದ ಹುದ್ದೆಗೆ ನೇಮಕವಾದ ಬಳಿಕ ಪ್ರಿಯಾಂಕಾ ಪಾಲ್ಗೊಂಡಿದ್ದ ಮೊದಲ ಅಧಿಕೃತ ಸಭೆ ಇದಾಗಿತ್ತು. ಇದರ ಬೆನ್ನಲ್ಲೇ ಈಗ ರಾಹುಲ್​ ಗಾಂಧಿ ಎಲ್ಲ ರಾಜ್ಯಗಳ ಕಾಂಗ್ರೆಸ್​ ಅಧ್ಯಕ್ಷರು ಮತ್ತು ಶಾಸಕಾಂಗ ಪಕ್ಷದ ನಾಯಕರ ಜತೆ ಸಭೆ ನಡೆಸಲಿದ್ದಾರೆ. ಕರ್ನಾಟಕದಿಂದ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಮತ್ತು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.