ಕನಸು ಕಾಣಲು, ಮಾತನಾಡಲು ಟ್ಯೂಷನ್‌ ಪಡೆದುಕೊಂಡ ರಾಹುಲ್‌ ಗಾಂಧಿ: ಸ್ಮೃತಿ ಇರಾನಿ

ನವದೆಹಲಿ: ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಟೀಕಿಸಿದ್ದು, ರಾಹುಲ್‌ ಅವರು ಕನಸು ಕಾಣಲು, ಏನು ಮಾತನಾಡಬೇಕು ಮತ್ತು ಮಾತನಾಡಬಾರದು ಎಂಬುದಕ್ಕೆ ಟ್ಯೂಷನ್‌ ಪಡೆಯುತ್ತಾರೆ ಎಂದು ಹೇಳಿದ್ದಾರೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ರಾಹುಲ್‌ ಗಾಂಧಿ ಅವರು ಕನಸಿಗೂ ಟ್ಯೂಷನ್‌ ಪಡೆಯುತ್ತಾರೆ. ಅವರಿಗೆ ತಮ್ಮ ಮಾತಿನ ಮೇಲೆಯೇ ನಂಬಿಕೆಯಿಲ್ಲ. ಬದಲಿಗೆ ತಾನು ಏನು ಮಾತನಾಡಬೇಕು ಎಂಬುದನ್ನು ಅವರು ಇತರರಿಂದ ಕೇಳಿಸಿಕೊಳ್ಳುತ್ತಾರೆ ಎಂಬುದು ವಿಡಿಯೋದಲ್ಲಿ ತಿಳಿಯುತ್ತದೆ. ಹಾಗಾಗಿ ಈ ದೇಶದ ಯಾವುದೇ ಚುನಾವಣೆ ಹುದ್ದೆಗೂ ಅವರು ಅರ್ಹರಲ್ಲ ಎಂಬುದನ್ನು ಜನರು ತಿಳಿದುಕೊಳ್ಳಲು ಇದೊಂದು ಎಚ್ಚರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ರೈತರ ಸಾಲಮನ್ನಾ ಘೋಷಿಸಿದ ಬಳಿಕ ರಾಹುಲ್‌ ಗಾಂಧಿ ಇತರೆ ಕಾಂಗ್ರೆಸ್‌ ನಾಯಕರೊಂದಿಗೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದರು. ಈ ವೇಳೆ ಜ್ಯೋತಿರಾದಿತ್ಯ ಮಾಧವರಾವ್‌ ಸಿಂಧಿಯಾ ಕೂಡ ಇದ್ದರು. ರಾಹುಲ್‌ ಮಾತನಾಡುವ ಮುನ್ನ ಸಿಂಧಿಯಾ ಅವರು, ಮೋದಿಯವರು ಏನನ್ನು ಮಾಡಿಲ್ಲವೋ, ಅದನ್ನು ನಾನು ಮಾಡುತ್ತೇನೆ ಎಂದು ರೈತರ ಸಾಲಮನ್ನಾ ಕುರಿತು ಮಾತನಾಡಬೇಕು ಎಂದು ಹೇಳಿದ್ದ ವಿಡಿಯೋ ವೈರಲ್‌ ಆದ ಬಳಿಕ ಸ್ಮೃತಿ ಇರಾನಿ ಅವರು ವಿಡಿಯೋ ಸಮೇತ ಟ್ವೀಟ್‌ ಮಾಡಿದ್ದರು.

ಇತ್ತೀಚಿನ ದಿನಗಳಲ್ಲಿ ಕನಸು ಕಾಣಲು ಕೂಡ ನಿಮಗೆ ಟ್ಯೂಷನ್‌ ಅಗತ್ಯವಿದೆಯೇ ಎಂದು ರಾಹುಲ್‌ ಗಾಂಧಿ ಅವರನ್ನು ಛೇಡಿಸಿದ್ದರು.

ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೇಶದ ಹಿತಕ್ಕಾಗಿ ಕೇಂದ್ರ ಸರ್ಕಾರ ದುಡಿಯುತ್ತಿದೆ. ರೈತರಿಂದ ಸಾಮಾನ್ಯ ಜನರವರೆಗೂ ಎಲ್ಲ ಕ್ಷೇತ್ರಗಳಲ್ಲೂ ಗಣನೀಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ಬಿಜೆಪಿ ಆಡಳಿತಾವಧಿಯಲ್ಲಿನ ಅಭಿವೃದ್ಧಿಯನ್ನು ನೋಡಿಯೇ 2014ರ ಲೋಕಸಭಾ ಚುನಾವಣೆಯಲ್ಲಿ ಜನರು ಬಿಜೆಪಿಗೆ ಆಶೀರ್ವದಿಸಿದ್ದರು ಎಂದು ಹೇಳಿದರು. (ಏಜೆನ್ಸೀಸ್)