ಸುದ್ದಿಗೋಷ್ಠಿ ನಡೆಸಿದ ಪ್ರಧಾನಿ ಮೋದಿಯವರಿಗೆ ಅಭಿನಂದನೆ ಹೇಳಿದ ರಾಹುಲ್​ ಗಾಂಧಿ !

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ನಿನ್ನೆ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು. ಈ ಸುದ್ದಿಗೋಷ್ಠಿಯ ಕುರಿತೂ ಪ್ರತಿಪಕ್ಷಗಳ ಕೆಲವು ಮುಖಂಡರು ಟೀಕೆ ಮಾಡುತ್ತಿದ್ದು, ಅಮಿತ್​ ಷಾ ಅವರೇ ಎಲ್ಲದಕ್ಕೂ ಉತ್ತರಿಸಿದ್ದಾರೆ. ಮೋದಿ ಯಾವ ಪ್ರಶ್ನೆಗಳನ್ನೂ ತೆಗೆದುಕೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ.

ಇವರಿಬ್ಬರ ಸುದ್ದಿಗೋಷ್ಠಿ ನಡೆಯುತ್ತಿರುವಾಗಲೇ ಕಾಂಗ್ರೆಸ್​ ಕಚೇರಿಯಲ್ಲಿ ಮಾತನಾಡಿದ್ದ ರಾಹುಲ್​ ಗಾಂಧಿ, ನನಗಾದರೆ ಕಠಿಣ ಪ್ರಶ್ನೆಗಳನ್ನು ಕೇಳುತ್ತೀರಿ ಎಂದು ಕೂಡ ಆರೋಪಿಸಿದ್ದರು. ಹಾಗೇ ಸುದ್ದಿಗೋಷ್ಠಿ ಮುಗಿದ ಬಳಿಕ ಅದನ್ನು ಟೀಕಿಸಿ ಟ್ವೀಟ್​ ಮಾಡಿದ್ದಾರೆ.

ಅಭಿನಂದನೆಗಳು ಮೋದಿ ಜೀ, ಅತ್ಯುತ್ತಮ ಸುದ್ದಿಗೋಷ್ಠಿ. ಉತ್ತಮವಾಗಿ ಪ್ರಾರಂಭ ಮಾಡಿದ್ದೀರಿ. ಅಮಿತ್​ ಷಾ ಅವರು ಮುಂದಿನ ಬಾರಿಯಾದರೂ ನಿಮಗೆ ಒಂದಷ್ಟು ಪ್ರಶ್ನೆಗಳಿಗೆ ಉತ್ತರಿಸಲು ಅವಕಾಶ ನೀಡಬಹುದು ಎಂದು ವ್ಯಂಗ್ಯವಾಡಿದ್ದಾರೆ.

ನರೇಂದ್ರ ಮೋದಿಯವರು ಇದುವರೆಗೂ ಒಂದೂ ಸುದ್ದಿಗೋಷ್ಠಿ ನಡೆಸಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಹಾಗೇ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದರೂ ಅವರು ಯಾವುದೇ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಅದನ್ನು ಕೇಳಿದಾಗ, ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ಅಧ್ಯಕ್ಷರು ಏನು ಹೇಳುತ್ತಾರೋ ಅದನ್ನು ಪಾಲಿಸುತ್ತೇನೆ ಎಂದಿದ್ದರು.