ಗಣಿಯಲ್ಲಿ 15 ಕಾರ್ಮಿಕರು ಸಿಲುಕಿದ್ದರೆ, ಇತ್ತ ಪ್ರಧಾನಿ ಮೋದಿ ಫೋಟೊಗೆ ಪೋಸ್‌ ನೀಡುತ್ತಿದ್ದಾರೆ: ರಾಹುಲ್‌ ಗಾಂಧಿ

ನವದೆಹಲಿ: ಮೇಘಾಲಯದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿರುವ 15 ಕಾರ್ಮಿಕರನ್ನು ರಕ್ಷಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಟ್ವಿಟರ್‌ನಲ್ಲಿ ಕುಟುಕಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಹುಲ್‌ ಅವರು, ಕೇಂದ್ರ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು ಕಲ್ಲಿದ್ದಲು ಗಣಿಯಿಂದ ಕಾರ್ಮಿಕರನ್ನು ರಕ್ಷಿಸಿಲ್ಲ. 15 ಜನ ಕಾರ್ಮಿಕರು ಕಳೆದ ಎರಡು ವಾರಗಳಿಂದಲೂ ಆಮ್ಲಜನಕವೂ ದೊರಕದ ಸ್ಥಿತಿಯಲ್ಲಿ ಪರದಾಡುತ್ತಿದ್ದಾರೆ. ಆದರೆ ಪ್ರಧಾನಿ ಮೋದಿ ಮಾತ್ರ ಬೋಗಿಬೆಲ್‌ ಸೇತುವೆ ಉದ್ಘಾಟನೆಯಲ್ಲಿ ಕ್ಯಾಮರಾಗಳಿಗೆ ಪೋಸ್‌ ಕೊಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಮುಂದುವರಿದು ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಉನ್ನತ ಪಂಪುಗಳು ಸೇರಿದಂತೆ ದಕ್ಷ ಉಪಕರಣಗಳನ್ನು ಒದಗಿಸಲು ಮೋದಿ ಸರಕಾರ ವಿಫಲವಾಗಿದೆ. ಪ್ರಧಾನಮಂತ್ರಿಗಳೇ ದಯವಿಟ್ಟು ಗಣಿ ನೌಕರರನ್ನು ರಕ್ಷಿಸಿ. ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಟ್ವೀಟ್‌ ಮಾಡಿದ್ದಾರೆ.

ಇದಕ್ಕೂ ಮುನ್ನ ಎನ್‌ಡಿಆರ್‌ಎಫ್‌ನ ಅಧಿಕಾರಿ ಎಸ್‌ಕೆ ಶಾಸ್ತ್ರಿ ಮಾತನಾಡಿ, ದಕ್ಷ ಉಪಕರಣಗಳ ಕೊರತೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಂಡಿದೆ ಎಂದು ಹೇಳಿದ್ದರು.

ಮೇಘಾಲಯದ ಪೂರ್ವ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಕಸಾನ್‌ ಗ್ರಾಮದಲ್ಲಿ ನಡೆಸುತ್ತಿದ್ದ ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ವೇಳೆ 15 ಜನ ನೌಕರರು ಸಿಲುಕಿದ್ದು, ಆ ಪ್ರದೇಶದಲ್ಲಿ ಹೆಚ್ಚಿನ ನೀರು ಆವರಿಸಿಕೊಂಡಿರುವುದಿಂದಾಗಿ ನೌಕರರನ್ನು ರಕ್ಷಿಸಲು ಸಾಧ್ಯವಾಗಿಲ್ಲ.

ಇನ್ನು ಮೇಘಾಲಯದಲ್ಲಿ 2014ರಲ್ಲೇ ಗಣಿಗಾರಿಕೆಯನ್ನು ನಿಷೇಧಿಸಲಾಗಿದೆ. ಗಣಿಗಾರಿಕೆಯಿಂದಾಗಿ ನೀರಿನ ಮೂಲಗಳು ಕಲುಷಿತವಾಗುತ್ತಿವೆ ಮತ್ತು ಅಪಾಯಕಾರಿ ಸುರಂಗಗಳ ಮೂಲಕ ಅಕ್ರಮವಾಗಿ ಕಲ್ಲಿದ್ದಲ್ಲನ್ನು ಹೊರತೆಗೆಯುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದರು. ಕಲ್ಲಿದ್ದಲು ಇರುವ ಪ್ರದೇಶವನ್ನು ತಲುಪಲು ಬೆಟ್ಟದ ಬದಿಯನ್ನು ಕೊರೆಯುವ ಮೂಲಕ ಸಮಾನಾಂತರವಾಗಿ ಸುರಂಗಗಳನ್ನು ನಿರ್ಮಿಸಲಾಗುತ್ತದೆ. (ಏಜೆನ್ಸೀಸ್)