ಭಯೋತ್ಪಾದನೆ ಪ್ರಮುಖ ವಿಷಯ ಅಲ್ಲದಿದ್ದರೆ ರಾಹುಲ್​ ಎಸ್​ಪಿಜಿ ಭದ್ರತೆಯನ್ನು ತ್ಯಜಿಸಲಿ: ಸುಷ್ಮಾ ಸವಾಲು

ಹೈದರಾಬಾದ್​: ಭಯೋತ್ಪಾದನೆ ಒಂದು ಪ್ರಮುಖ ವಿಷಯ ಅಲ್ಲ ಎನ್ನುವುದಾದರೆ, ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರು ತಮಗೆ ನೀಡಿರುವ ಎಸ್​ಪಿಜಿ ಭದ್ರತೆಯನ್ನು ವಾಪಸ್​ ನೀಡಲಿ ಎಂದು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್​ ಸವಾಲೆಸೆದಿದ್ದಾರೆ.

ಉದ್ಯೋಗ ಪ್ರಮುಖ ವಿಷಯ, ಭಯೋತ್ಪಾದನೆಯಲ್ಲ ಎಂದು ರಾಹುಲ್​ ಗಾಂಧಿ ನೀಡಿದ್ದ ಹೇಳಿಕೆಗೆ ಸುಷ್ಮಾ ಸ್ವರಾಜ್​ ತಿರುಗೇಟು ನೀಡಿದ್ದು, ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಹತ್ಯೆಯಾದ ನಂತರ ನಿಮ್ಮ ಕುಟುಂಬದ ಸದಸ್ಯರೆಲ್ಲರಿಗೂ ಎಸ್​ಪಿಜಿ ಕಮ್ಯಾಂಡೋಗಳು ಭದ್ರತೆ ಒದಗಿಸುತ್ತಿದ್ದಾರೆ. ಭಯೋತ್ಪಾದನೆ ಒಂದು ಪ್ರಮುಖ ವಿಷಯ ಅಲ್ಲ ಮತ್ತು ದೇಶದಲ್ಲಿ ಭಯೋತ್ಪಾದನೆ ಇಲ್ಲ ಎಂದು ನಿಮ್ಮ ಅಭಿಪ್ರಾಯವಾಗಿದ್ದರೆ ಭದ್ರತೆ ಬೇಡ ಎಂದು ಲಿಖಿತ ಮನವಿ ನೀಡಿ ಎಂದು ಸುಷ್ಮಾ ಸ್ವರಾಜ್​ ತಿಳಿಸಿದ್ದಾರೆ.

ವಿರೋಧ ಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ನಂಬಿಕೆಯಿಲ್ಲ. ಬಾಲಾಕೋಟ್​ ದಾಳಿಯ ಕುರಿತು ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ನೀಡಿದ ಹೇಳಿಕೆಗಳನ್ನು ಆಧಾರವಾಗಿಟ್ಟುಕೊಂಡು ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ ಜಗತ್ತಿನ ಅನೇಕ ದೇಶಗಳ ನಾಯಕರು ನನಗೆ ಕರೆ ಮಾಡಿ ಭಯೋತ್ಪಾದನೆ ವಿರುದ್ಧ ಭಾರತ ತೆಗೆದುಕೊಂಡಿರುವ ನಿಲುವನ್ನು ಶ್ಲಾಘಿಸಿದ್ದಾರೆ ಎಂದು ಸುಷ್ಮಾ ವಿರೋಧ ಪಕ್ಷಗಳ ನಡೆಯನ್ನು ಟೀಕಿಸಿದ್ದಾರೆ. (ಏಜೆನ್ಸೀಸ್​)