ಕಾಂಗ್ರೆಸ್​ ಅಧ್ಯಕ್ಷರಿಂದ ಮೊದಲ ಇಫ್ತಾರ್​ ಕೂಟ: ರಾಹುಲ್​ ಹೇಳಿದ್ದೇನು?

ನವದೆಹಲಿ: ರಂಜಾನ್​ ವಿಶೇಷವಾಗಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಬುಧವಾರ ರಾತ್ರಿ ಇಫ್ತಾರ್​ ಕೂಟ ಆಯೋಜನೆ ಮಾಡಿದ್ದರು. ಈ ವೇಳೆ ಮಾಜಿ ರಾಷ್ಟ್ರಪತಿಗಳಾದ ಪ್ರಣಾಬ್​​ ಮುಖರ್ಜಿ, ಪ್ರತಿಭಾ ಪಾಟೀಲ್ ಹಾಗೂ ಮಾಜಿ ಉಪರಾಷ್ಟ್ರಪತಿಗಳಾದ ಅಮೀದ್​ ಅನ್ಸಾರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.​

ರಾಹುಲ್​ ಅವರು ಕಾಂಗ್ರೆಸ್​ ಅಧ್ಯಕ್ಷರಾದ ನಂತರ ಆಯೋಜನೆಗೊಂಡ ಮೊದಲ ಇಫ್ತಾರ್​ ಕೂಟ ಇದಾಗಿದೆ. ದೆಹಲಿಯ ಹೋಟೆಲೊಂದರಲ್ಲಿ ಆಯೊಜನೆಗೊಂಡಿದ್ದ ಕೂಟದಲ್ಲಿ ಕಾಂಗ್ರೆಸ್​ ನಾಯಕರಾದ ರಣದೀಪ್​ ಸಿಂಗ್​ ಸುರ್ಜೆವಾಲ, ಆನಂದ ಶರ್ಮಾ, ಗುಲಾಮ್​ ನಬಿ ಆಜಾದ್​ ಹಾಗೂ ನಟಿ ನಫಿಸಾ ಅಲಿ ಭಾಗವಹಿಸಿದ್ದರು.

ಅಲ್ಲದೆ, ವಿರೋಧ ಪಕ್ಷದ ನಾಯಕರುಗಳಾದ ಡಿ.ಪಿ. ತಿಪಾಠಿ(ಎನ್​ಸಿಪಿ), ಡ್ಯಾನಿಶ್​ ಅಲಿ(ಜೆಡಿಎಸ್​), ಮನೋಜ್​ ಝಾ(ಆರ್​ಜೆಡಿ), ದಿನೇಶ್​​ ತ್ರಿವೇದಿ(ಟಿಎಂಸಿ), ಸತೀಶ್​ ಚಂದ್ರ ಮಿಶ್ರಾ(ಬಿಎಸ್​ಪಿ), ಕನ್ನಿಮೋಳಿ(ಡಿಎಂಕೆ) ಹಾಗೂ ಸೀತಾರಾಮ್​ ಯೆಚುರಿ(ಸಿಪಿಐ-ಎಂ)ಕೂಡ ಕೂಟದಲ್ಲಿ ಪಾಲ್ಗೊಂಡಿದ್ದರು.

ಭಾರತದ ರಷ್ಯಾ ರಾಯಭಾರಿ ನಿಕೋಲಾಯ್​ ಆರ್​ ಕುದಾಶೇವ್​ ಸೇರಿದಂತೆ ಅನೇಕ ವಿದೇಶಿ ಪ್ರತಿನಿಧಿಗಳನ್ನು ಇಫ್ತಾರ್​ ಕೂಟಕ್ಕೆ ಆಹ್ವಾನಿಸಿದ್ದರು.

ಈ ಬಗ್ಗೆ ಟ್ವೀಟ್​ ಮಾಡಿರುವ ರಾಹುಲ್​ ಅವರು ಒಳ್ಳೆಯ ಆಹಾರದ ಜತೆಗೆ ಸ್ನೇಹಿ ಮುಖಗಳು ಹಾಗೂ ಉತ್ತಮ ಸಂವಹನ ಇಫ್ತಾರ್​ ಕೂಟವನ್ನು ಸ್ಮರಣೀಯವಾಗಿಸಿದೆ. ಈ ವೇಳೆ ಇಬ್ಬರು ಮಾಜಿ ರಾಷ್ಟ್ರಪತಿಗಳು ನಮ್ಮೊಂದಿಗಿದ್ದಿದ್ದು ನಮ್ಮ ಗೌರವವನ್ನು ಹೆಚ್ಚಿಸಿದೆ. ವಿವಿಧ ಪಕ್ಷದ ನಾಯಕರು, ಮಾಧ್ಯಮಗಳು, ರಾಜತಾಂತ್ರಿಕರು ಹಾಗೂ ಅನೇಕ ಹಳೆಯ ಮತ್ತು ಹೊಸ ಸ್ನೇಹಿತರು ನಮ್ಮೊಂದಿಗೆ ಪಾಲ್ಗೊಂಡಿದ್ದು ಸ್ಮರಣೀಯ ಎಂದು ಹೇಳಿದ್ದಾರೆ.

ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಿರುವ ಕಾರಣದಿಂದ ಕಾಂಗ್ರೆಸ್​ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಇಫ್ತಾರ್​ ಕೂಟದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. (ಏಜೆನ್ಸೀಸ್​)

Leave a Reply

Your email address will not be published. Required fields are marked *