ಇಂದು ಶಾಸಕಾಂಗ ಸಭೆಯಲ್ಲಿ ಸಿಎಂ ಆಯ್ಕೆ

ನವದೆಹಲಿ: ಚುನಾವಣೆ ಫಲಿತಾಂಶ ಬಂದು 6 ದಿನಗಳಾದರೂ ಛತ್ತೀಸ್​ಗಢಕ್ಕೆ ಮುಖ್ಯಮಂತ್ರಿ ಯಾರೆಂದು ನಿರ್ಧರಿಸಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಸಾಧ್ಯವಾಗಿಲ್ಲ. ಮೂರು ದಿನಗಳ ಸಾಹಸದ ಬಳಿಕ ಮಧ್ಯಪ್ರದೇಶ ಹಾಗೂ ರಾಜಸ್ಥಾನಕ್ಕೆ ಸಿಎಂಗಳನ್ನು ಕಾಂಗ್ರೆಸ್ ಘೋಷಿಸಿತ್ತು. ಆದರೆ ಛತ್ತೀಸ್​ಗಢದಲ್ಲಿ ಮೂವರು ಹಿರಿಯ ಕಾಂಗ್ರೆಸ್ಸಿಗರ ಪೈಪೋಟಿ ಹಿನ್ನೆಲೆ ಯಾವುದೇ ತೀರ್ವನಕ್ಕೆ ಬರಲು ಆಗಿಲ್ಲ.

ಸಿಎಂ ಹುದ್ದೆ ಆಕಾಂಕ್ಷಿಗಳೊಂದಿಗೆ 4 ಸುತ್ತಿನ ಮಾತುಕತೆ ಬಳಿಕವೂ ಅಂತಿಮ ತೀರ್ವನವಾಗಿಲ್ಲ. ಉಳಿದ ಎರಡು ರಾಜ್ಯಗಳಲ್ಲಿನ ನಿರ್ಣಯದಂತೆಯೇ ಛತ್ತೀಸ್​ಗಢ ವಿಚಾರದಲ್ಲಿಯೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕಾ ಮಧ್ಯಪ್ರವೇಶಿಸಿದ್ದಾರೆ.

ಯಾರು ಮೊದಲು ಸಿಎಂ : ಕಾಂಗ್ರೆಸ್ ಮೂಲಗಳ ಪ್ರಕಾರ ಭಾನುವಾರ ಮಧ್ಯಾಹ್ನ 12 ಗಂಟೆಗೆ ಛತ್ತೀಸ್​ಗಢದ ರಾಯ್ಪುರದಲ್ಲಿ ಶಾಸಕಾಂಗ ಸಭೆ ನಡೆಯಲಿದೆ. ಅಲ್ಲಿ ರಾಷ್ಟ್ರೀಯ ವೀಕ್ಷಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಹೆಸರು ಘೋಷಿಸಲಿದ್ದಾರೆ. ಭೂಪೇಶ್ ಬಾಗೇಲಾ ಹಾಗೂ ಟಿ.ಎಸ್.ಸಿಂಗ್ ದೇವ್ ಹೆಸರು ಮುಂಚೂಣಿಯಲ್ಲಿದ್ದು, ತಾಮ್ರಧ್ವಜ್ ಸಾಹು ಹಾಗೂ ಚರಣ್​ದಾಸ್ ಮಹಂತ್ ಹೆಸರು ಕೂಡ ಕೇಳಿಬಂದಿದೆ. ಬಾಗೇಲಾ ಹಾಗೂ ದೇವ್ ಅವರು 30 ತಿಂಗಳು ಅಧಿಕಾರ ಹಂಚಿಕೊಳ್ಳುವ ಸಾಧ್ಯತೆಯಿದೆ. ಅದರೆ ಯಾರು ಮೊದಲು ಸಿಎಂ ಆಗುತ್ತಾರೆ ಎಂಬ ರಹಸ್ಯ ಬಯಲಾಗಿಲ್ಲ. ಗೊಂದಲದ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ‘ನೀವು ಎಷ್ಟೇ ಬುದ್ಧಿವಂತ ರಾಗಿದ್ದರೂ, ಒಂಟಿಯಾದರೆ ತಂಡ ಸೋಲಬೇಕಾಗುತ್ತದೆ ’ ಎಂದಿದ್ದಾರೆ.

ಏತ್ಮನಧ್ಯೆ, ಮಿಜೋರಾಂನಲ್ಲಿ ಎಂಎನ್​ಎಫ್ ಪಕ್ಷದ ಮುಖ್ಯಸ್ಥ ಜೋರಾಂಥಂಗಾ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸಿದರು.