ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಅಮೇಠಿಯಲ್ಲಿ ಸಲ್ಲಿಸಿದ್ದ ನಾಮಪತ್ರ ಸಿಂಧು: ಯುಪಿ ಆಯೋಗದ ನಿರ್ಧಾರ

ನವದೆಹಲಿ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅಮೇಠಿ ಲೋಕಸಭಾ ಕ್ಷೇತ್ರದಿಂದ ಆಯ್ಕೆ ಬಯಸಿ ಸಲ್ಲಿಸಿದ್ದ ನಾಮಪತ್ರ ಸಿಂಧು ಆಗಿರುವುದಾಗಿ ಉತ್ತರ ಪ್ರದೇಶ ಚುನಾವಣಾ ಆಯೋಗ ಹೇಳಿದೆ.

ರಾಹುಲ್​ ಅವರ ನಾಮಪತ್ರದ ಜತೆ ಸಲ್ಲಿಸಲಾಗಿರುವ ಶೈಕ್ಷಣಿಕ ಅರ್ಹತೆ ಪ್ರಮಾಣ ಪತ್ರದಲ್ಲಿ ಗೊಂದಲ ಇರುವ ಜತೆಗೆ ಬ್ರಿಟನ್​ನಲ್ಲಿ ಕಂಪನಿಯೊಂದನ್ನು ಹೊಂದಿರುವ ಅವರು ತಾವು ಬ್ರಿಟನ್​ ಪ್ರಜೆ ಎಂದು ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಅಮೇಠಿ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಧ್ರುವ ಲಾಲ್​ ಎಂಬುವರು ಚುನಾವಣಾ ಆಯೋಗಕ್ಕೆ ಆಕ್ಷೇಪ ಸಲ್ಲಿಸಿದ್ದರು.

ಧ್ರುವ ಲಾಲ್​ ಜತೆಗೆ ಅಮೇಠಿ ಕ್ಷೇತ್ರದಲ್ಲಿ ಕಣದಲ್ಲಿದ್ದ ಇನ್ನೂ ಹಲವು ಪಕ್ಷೇತರ ಅಭ್ಯರ್ಥಿಗಳು ಕೂಡ ಇದೇ ಕಾರಣ ನೀಡಿ ಆಕ್ಷೇಪಣೆ ಸಲ್ಲಿಸಿದ್ದರು. ಈ ಕುರಿತು ರಾಹುಲ್​ ಗಾಂಧಿ ಪರ ವಕೀಲರು ಚುನಾವಣಾ ಆಯೋಗಕ್ಕೆ ಸೋಮವಾರ ಬೆಳಗ್ಗೆ ಸ್ಷಪ್ಟನೆ ನೀಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ್ದ ರಾಹುಲ್​ ಪರ ವಕೀಲರು, ಅಮೇಠಿಯಲ್ಲಿ ಕಣದಲ್ಲಿರುವ ಪಕ್ಷೇತರ ಅಭ್ಯರ್ಥಿಗಳೆಲ್ಲರೂ ಒಂದೇ ರೀತಿಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಬ್ಬರು ಅಭ್ಯರ್ಥಿಗಳು ಸಲ್ಲಿಸಿರುವ ಆಕ್ಷೇಪ ಅರ್ಜಿಯು ಒಂದೇ ಕಂಪ್ಯೂಟರ್​ನಲ್ಲಿ ಪ್ರಿಂಟ್​ ತೆಗೆದುಕೊಡಲಾಗಿದೆ. ಒಟ್ಟಾರೆ ಈ ಎಲ್ಲ ಆಕ್ಷೇಪಗಳಿಗೆ ನಾವು ಸ್ಪಷ್ಟನೆ ನೀಡಿದ್ದೇವೆ. ಅವರ ನಾಮಪತ್ರ ಸ್ವೀಕೃತವಾಗುವ ವಿಶ್ವಾಸವಿದೆ ಎಂದು ಹೇಳಿದ್ದರು.

ವಯನಾಡಿನಲ್ಲೂ ಸ್ವೀಕೃತ?: ಅಮೇಠಿಯಲ್ಲಿ ಸಲ್ಲಿಸಲಾಗಿದ್ದ ಆಕ್ಷೇಪಗಳ ಬೆನ್ನಲ್ಲೇ ಕೇರಳದ ವಯನಾಡಿನಿಂದಲೂ ಕಣಕ್ಕಿಳಿದಿರುವ ರಾಹುಲ್​ ಗಾಂಧಿ ಅವರ ನಾಮಪತ್ರದ ಕುರಿತು ಎನ್​ಡಿಎ ಅಭ್ಯರ್ಥಿ ತುಷಾರ್​ ವೆಳ್ಳಿಯಪ್ಪನ್​ ಕೂಡ ರಾಹುಲ್​ ವಿದೇಶದ ಪಾಸ್​ಪೋರ್ಟ್​ ಹೊಂದಿದ್ದು, ನಾಮಪತ್ರ ಸಲ್ಲಿಸುವ ಈ ಕುರಿತು ಮಾಹಿತಿ ನೀಡಿಲ್ಲ ಅಥವಾ ಪ್ರಮಾಣಪತ್ರವನ್ನೂ ಸಲ್ಲಿಸಿಲ್ಲ ಎಂದು ಆರೋಪಿಸಿ, ಕೇರಳ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

ಇದೀಗ ಅಮೇಠಿಯಲ್ಲಿ ರಾಹುಲ್​ ನಾಮಪತ್ರ ಸ್ವೀಕಾರಗೊಂಡಿರುವ ಹಿನ್ನೆಲೆಯಲ್ಲಿ ವಯನಾಡಿನಲ್ಲಿ ಕೂಡ ರಾಹುಲ್​ ಅವರ ನಾಮಪತ್ರ ಸಿಂಧುತ್ವ ಅಬಾಧಿತವಾಗಿ ಉಳಿಯಲಿದೆ.