ಪೌರತ್ವ ಮತ್ತು ಶೈಕ್ಷಣಿಕ ಅರ್ಹತೆ ಕುರಿತ ಶಂಕೆ ಹಿನ್ನೆಲೆ, ಪ್ರತಿಷ್ಠಿತ ವ್ಯಕ್ತಿಯ ನಾಮಪತ್ರ ಪರಿಶೀಲನೆ ಸೋಮವಾರಕ್ಕೆ ಮುಂದೂಡಿಕೆ

ಅಮೇಠಿ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ತಮ್ಮ ಕುಟುಂಬ ಸಾಂಪ್ರದಾಯಿಕ ಕ್ಷೇತ್ರ ಅಮೇಠಿಯಲ್ಲಿ ಸಲ್ಲಿಸಿರುವ ನಾಮಪತ್ರದ ಪರಿಶೀಲನೆಯನ್ನು ಚುನಾವಣಾಧಿಕಾರಿ ಸೋಮವಾರಕ್ಕೆ ಮುಂದೂಡಿದ್ದಾರೆ. ನಾಮಪತ್ರ ಸಲ್ಲಿಸುವಾಗ ರಾಹುಲ್​ ಸಲ್ಲಿಸಿರುವ ಬ್ರಿಟನ್​ ಪೌರತ್ವದ ದಾಖಲೆ ಹಾಗೂ ಅವರ ಶೈಕ್ಷಣಿಕ ಅರ್ಹತೆಯ ಪ್ರಮಾಣಪತ್ರಗಳ ಬಗ್ಗೆ ಅಮೇಠಿಯಲ್ಲಿ ಕಣಕ್ಕಿಳಿದಿರುವ ಪಕ್ಷೇತರ ಅಭ್ಯರ್ಥಿ ಶಂಕೆ ವ್ಯಕ್ತಪಡಿಸಿರುವುದು ಇದಕ್ಕೆ ಕಾರಣ.

ಅಮೇಠಿಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿರುವ ಧ್ರುವ ಲಾಲ್​ ಪರ ವಕೀಲ ರವಿ ಪ್ರಕಾಶ್​ ಈ ಮಾಹಿತಿ ನೀಡಿದ್ದಾರೆ. ಬ್ರಿಟನ್​ನಲ್ಲಿ ರಾಹುಲ್​ ಗಾಂಧಿ ಹೆಸರಿನಲ್ಲಿ ಒಂದು ಕಂಪನಿಯನ್ನು ನೋಂದಣಿ ಮಾಡಿಸಲಾಗಿದೆ. ಅದರಲ್ಲಿ ಅವರು ತಾವು ಬ್ರಿಟನ್​ ನಿವಾಸಿ ಎಂದು ಘೋಷಿಸಿದ್ದಾರೆ. ಹಾಗಾಗಿ, ಬ್ರಿಟನ್​ ಪೌರತ್ವ ಹೊಂದಿರುವ ಅವರು ವಿದೇಶಿ ಪ್ರಜೆಯಾಗುತ್ತಾರೆ. ಆದ್ದರಿಂದ, ಅವರಿಗೆ ಭಾರತದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗುತ್ತಾರೆ ಎಂದು ವಿವರಿಸಿದರು.

ಆ ಕಂಪನಿಯ ಚರ ಮತ್ತು ಸ್ಥಿರಾಸ್ತಿ ಕುರಿತು ಪ್ರಮಾಣಪತ್ರದಲ್ಲಿ ಯಾವುದೇ ಮಾಹಿತಿ ಒದಗಿಸಲಾಗಿಲ್ಲ. ನಾಮಪತ್ರದೊಂದಿಗೆ ರಾಹುಲ್​ ಸಲ್ಲಿಸಿರುವ ಶೈಕ್ಷಣಿಕ ಅರ್ಹತೆಯ ಪ್ರಮಾಣಪತ್ರಗಳಲ್ಲೂ ಸಾಕಷ್ಟು ಗೊಂದಲಗಳಿವೆ. ಆದ್ದರಿಂದ, ರಾಹುಲ್​ ಗಾಂಧಿ ಅವರಿಗೆ ನಾಮಪತ್ರ ಪರಿಶೀಲನೆ ವೇಲೆ ಶೈಕ್ಷಣಿಕ ಅರ್ಹತೆಯ ಮೂಲ ದಾಖಲೆಗಳನ್ನು ಒದಗಿಸುವಂತೆ ಸೂಚಿಸಬೇಕು. ಅದನ್ನು ಆಧಾರವಾಗಿಟ್ಟುಕೊಂಡು ನಾಮಪತ್ರ ಪರಿಶೀಲಿಸಬೇಕು ಎಂದು ಚುನಾವಣಾಧಿಕಾರಿಗೆ ಮನವಿ ಮಾಡಿಕೊಳ್ಳಲಾಗಿದೆ. ಇದನ್ನು ಆಧರಿಸಿ, ಅವರ ನಾಮಪತ್ರ ಪರಿಶೀಲನೆಯನ್ನು ಚುನಾವಣಾಧಿಕಾರಿ ಸೋಮವಾರಕ್ಕೆ ಮುಂದೂಡಿದ್ದಾಗಿ ಹೇಳಿದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *