ರಾಹುಲ್ ಗಾಂಧಿಗೆ ಇಂದು ಅಗ್ನಿಪರೀಕ್ಷೆ

ನವದೆಹಲಿ: ಅಮೇಠಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಾಮಪತ್ರ ಪರಿಶೀಲನೆ ಸೋಮವಾರ ನಡೆಯಲಿದೆ.

ನಾಮಪತ್ರ ಜತೆಗೆ ಸಲ್ಲಿಸಿರುವ ಅಫಿಡವಿಟ್​ಗಳು ರಾಹುಲ್ ಗಾಂಧಿ ಭಾರತೀಯ ಪ್ರಜೆಯೋ ಅಥವಾ ಬ್ರಿಟಿಷ್ ನಾಗರಿಕರೋ ಎಂಬ ಪ್ರಶ್ನೆಗಳನ್ನೆತ್ತಿದೆ. ಇದಲ್ಲದೇ, ವಿದ್ಯಾರ್ಹತೆ ಕುರಿತು ಸಲ್ಲಿಸಿರುವ ಪ್ರಮಾಣಪತ್ರಗಳು ಕೂಡ ಅನೇಕ ಗೊಂದಲಗಳಿಗೆ ಕಾರಣವಾಗಿದೆ. ಪ್ರಮಾಣಪತ್ರದಲ್ಲಿ ಉಲ್ಲೇಖವಾಗಿರುವ ರೌಲ್ ವಿಂಚಿ ಯಾರು? ಎಂದು ಆಕ್ಷೇಪಿಸಿರುವ ಪಕ್ಷೇತರ ಅಭ್ಯರ್ಥಿ ಧ್ರುವ್ ಲಾಲ್ ಮೂಲ ಪ್ರಮಾಣಪತ್ರವನ್ನು ಹಾಜರುಪಡಿಸುವಂತೆ ಒತ್ತಾಯಿಸಿದ್ದಾರೆ.

ಇದಲ್ಲದೇ, 2004ರಲ್ಲಿ ಸಲ್ಲಿಸಿದ್ದ ನಾಮಪತ್ರದಲ್ಲಿ ಬ್ಯಾಕಾಪ್ಸ್ ಎಂಬ ಕಂಪನಿಯಲ್ಲಿ ಷೇರು ಹೊಂದಿದ್ದಾಗಿ ರಾಹುಲ್ ಉಲ್ಲೇಖಿಸಿದ್ದರು. ಆ ಕಂಪನಿಯ ಆದಾಯದ ವಿವರಗಳನ್ನು ಸಲ್ಲಿಸಿಲ್ಲ. ಅಲ್ಲದೇ, ಆ ಕಂಪನಿ ನಿರ್ದೇಶಕರಾಗಿದ್ದ ರಾಹುಲ್, ತಾವು ಬ್ರಿಟಿಷ್ ಪ್ರಜೆ ಎಂದು ಹೇಳಿಕೊಂಡಿದ್ದರು. ವಿದೇಶಿ ಪ್ರಜೆಯಾಗಿ ಭಾರತದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಹೇಗೆ ಸಾಧ್ಯ ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಈ ವಿಚಾರಗಳನ್ನು ರಾಹುಲ್ ಪರ ವಕೀಲರ ಗಮನಕ್ಕೆ ತಂದಿರುವ ಅಮೇಠಿ ಚುನಾವಣಾಧಿಕಾರಿ ವಿವರಣೆ ಬಯಸಿದ್ದರು. ಇದಕ್ಕೆ ಕಾಲಾವಕಾಶ ಬೇಕು ಎಂದು ಕೋರಿದ ಹಿನ್ನೆಲೆಯಲ್ಲಿ ನಾಮಪತ್ರ ಪರಿಶೀಲನೆಯನ್ನು ಸೋಮವಾರಕ್ಕೆ (ಏ.22) ಮುಂದೂಡಲಾಗಿತ್ತು.

ವಯನಾಡಿನಲ್ಲೂ ಸಂಕಷ್ಟ: ರಾಹುಲ್ ನಾಮಪತ್ರದ ವಿಚಾರವಾಗಿ ಕೇರಳದ ವಯನಾಡಿ ನಲ್ಲೂ ಬಿಜೆಪಿ ಅಭ್ಯರ್ಥಿ ತುಷಾರ್ ವೆಲ್ಲಪಳ್ಳಿ ಚುನಾವಣಾ ಆಯೋಗಕ್ಕೆ ಭಾನುವಾರ ದೂರು ಸಲ್ಲಿಸಿದ್ದಾರೆ. ರಾಹುಲ್ ವಿದೇಶಿ ಪಾಸ್​ಪೋರ್ಟ್ ಹೊಂದಿದ್ದು, ನಾಮಪತ್ರದ ಜತೆಗೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ಈ ವಿಷಯ ಬಹಿರಂಗಪಡಿಸಿಲ್ಲ. ಹೀಗಾಗಿ ನಾಮಪತ್ರವನ್ನು ತಿರಸ್ಕರಿಸಬೇಕೆಂದು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಸುಪ್ರಿಂಗೂ ಇಂದೇ ವಿವರಣೆ ನೀಡಬೇಕು

ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದಾರೆ ಎಂದು ನ್ಯಾಯಾಂಗ ನಿಂದನೆಗೆ ಗುರಿಯಾಗಿರುವ ರಾಹುಲ್ ಗಾಂಧಿ ಸುಪ್ರೀಂಗೂ ವಿವರಣೆ ನೀಡಬೇಕಿದೆ. ರಫೇಲ್ ಖರೀದಿಯ ರಹಸ್ಯ ದಾಖಲೆಗಳನ್ನು ಸಾಕ್ಷ್ಯವಾಗಿ ಪರಿಗಣಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿ ಆದೇಶ ಹೊರಡಿಸಿತ್ತು. ‘ಚೌಕಿದಾರ್ ಚೋರ್ ಹೈ’ ಎಂದು ಕೋರ್ಟ್ ತಿಳಿಸಿದೆ ಎಂದು ರಾಹುಲ್ ಅರ್ಥೈಸಿದ್ದರು. ಇದನ್ನು ಖಂಡಿಸಿ ಬಿಜೆಪಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದೆ.

ಕೆಲಸ ಮಾಡದಿದ್ದರೆ ಮಗನ ಬಟ್ಟೆ ಹರಿಯಿರಿ

ಧನೋರಾ(ಮಧ್ಯಪ್ರದೇಶ): ಚಿಂದ್ವಾರಾ ಕ್ಷೇತ್ರದೊಂದಿಗೆ 40 ವರ್ಷಗಳ ನಂಟನ್ನು ಹೊಂದಿದ್ದೇನೆ. ಇಲ್ಲಿನ ಜನರ ಸೇವೆಯನ್ನು ಮುಂದುವರಿಸುವ ಕಾಯಕವನ್ನು ಪುತ್ರನಿಗೆ ವಹಿಸಿದ್ದು, ಹೇಳಿದಂತೆ ಕೆಲಸ ಮಾಡದಿದ್ದರೆ ಆತನ ಬಟ್ಟೆ ಹರಿದು ಕೆಲಸ ಮಾಡಿಸಿಕೊಳ್ಳಿ ಎಂದು ಮಧ್ಯಪ್ರದೇಶದ ಸಿಎಂ ಕಮಲ್​ನಾಥ್ ಹೇಳಿದ್ದಾರೆ. ಚುನಾವಣಾ ರ್ಯಾಲಿಯಲ್ಲಿ ಪುತ್ರ ನಕುಲ್​ನಾಥ್ ಪರ ಮತಯಾಚಿಸಿದ ಸಿಎಂ, ಚಿಂದ್ವಾರಾ ಕ್ಷೇತ್ರದ ಸೇವೆಯನ್ನು ಪುತ್ರ ಮುಂದುವರಿಸಲಿದ್ದಾನೆ ಎಂದರು.

ಕಾಂಗ್ರೆಸ್​ಗೆ ಬಹುಮತ ದೊರೆಯದು: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುವುದಿಲ್ಲ. ಹೀಗಾಗಿ ಕೇಂದ್ರದಲ್ಲಿ ಸರ್ಕಾರ ರಚಿಸಲು ವಿವಿಧ ಪಕ್ಷಗಳೊಂದಿಗೆ ಚುನಾವಣೋತ್ತರ ಮೈತ್ರಿ ಅಗತ್ಯವಾಗಿದೆ ಎಂದು ಕಮಲ್​ನಾಥ್ ಹೇಳಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯುತ್ತಮ ಪ್ರದರ್ಶನ ನೀಡಲಿದೆ. ಆದರೆ, ಮೈತ್ರಿಯೊಂದಿಗೆ ಅಥವಾ ಮೈತ್ರಿ ಇಲ್ಲದೆ ಬಿಜೆಪಿಗೆ ಸಕಾರ ರಚಿಸುವ ಅವಕಾಶ ದೊರೆಯದು ಅವರು ಹೇಳಿದ್ದಾರೆ. ಪ್ರಧಾನಮಂತ್ರಿ ಸ್ಥಾನಕ್ಕೆ ಅಭ್ಯರ್ಥಿ ಯಾರಾಗುತ್ತಾರೆ ಎಂಬುದಕ್ಕೆ ಮೈತ್ರಿ ಪಕ್ಷಗಳು ನಿರ್ಣಯ ಕೈಗೊಳ್ಳಲಿವೆ ಎಂದು ವಿವರಿಸಿದರು.