ಮೋದಿ ಚೋರ್​ ಎಂಬ ರಾಹುಲ್​ ಹೇಳಿಕೆಗೆ ಐಪಿಎಲ್​ ಮಾಜಿ ಮುಖ್ಯಸ್ಥ ಲಲಿತ್​ ಮೋದಿ ಕೊಟ್ಟ ತಿರುಗೇಟು ಏನು?

ನವದೆಹಲಿ: ಎಲ್ಲಾ ಕಳ್ಳರು ತಮ್ಮ ಹೆಸರಿನ ಜತೆ ಮೋದಿ ಎಂಬ ಅಡ್ಡ ಹೆಸರು ಹೊಂದಿದ್ದಾರೆ ಎಂಬ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಹೇಳಿಕೆಗೆ ಈಗಾಗಲೇ ಬಿಹಾರ ಉಪಮುಖ್ಯಮಂತ್ರಿ ಸುಶೀಲ್​ ಕುಮಾರ್​ ಮೋದಿ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ. ಇದೀಗ ಐಪಿಎಲ್​ ಮಾಜಿ ಮುಖ್ಯಸ್ಥ ಲಲಿತ್​ ಮೋದಿ ರಾಹುಲ್​ ವಿರುದ್ಧ ಕಿಡಿಕಾರಿದ್ದಾರೆ.

ಶುಕ್ರವಾರ ತಮ್ಮ ಟ್ವಿಟರ್​ ಖಾತೆಯಲ್ಲಿ ಟ್ವೀಟ್​ ಮಾಡುವ ಮೂಲಕ ರಾಹುಲ್​ ಗಾಂಧಿ ಅವರ ಹೇಳಿಕೆಯನ್ನು ಖಂಡಿಸಿದ್ದು, ಯುಕೆ ಕೋರ್ಟ್​ನಲ್ಲಿ ರಾಹುಲ್​ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ. ಅಲ್ಲದೆ, ಕಾಂಗ್ರೆಸ್​ ಅನ್ನು ಜರಿದಿರುವ ಲಲಿತ್​ ಮೋದಿ, ಐದು ದಶಕಗಳ ಕಾಲ ಭಾರತವನ್ನು ಲೂಟಿ ಮಾಡಿದ್ದು ಯಾರು ಎಂಬ ವಾಸ್ತವ ಇಡೀ ಜಗತ್ತಿಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಲಲಿತ್​ ಮೋದಿ ಬಗ್ಗೆ ಹೇಳಬೇಕೆಂದರೆ ಮೊಟ್ಟ ಮೊದಲು ಐಪಿಎಲ್​ ಕಲ್ಪನೆಯನ್ನು ಭಾರತಕ್ಕೆ ಪರಿಚಯಿಸಿದ ಹೆಸರು ಅವರಿಗೆ ಸಲ್ಲುತ್ತದೆ. ಐಪಿಎಲ್​ ಮುಖ್ಯಸ್ಥರಾಗಿದ್ದು ಅವರನ್ನು ಹಣಕಾಸಿನ ಅಕ್ರಮಗಳ ಆರೋಪದ ಮೇರೆಗೆ 2010ರಲ್ಲಿ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಸಿ, ಐಪಿಎಲ್​​ನಿಂದಲೇ ಹೊರಗೆ ಹಾಕಲಾಯಿತು. ಬಳಿಕ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗುತ್ತಿದ್ದಂತೆ ಲಲಿತ್​ ಮೋದಿ ಅವರು ದೇಶವನ್ನು ಬಿಟ್ಟು ಹೋದರು. ಪ್ರಸ್ತುತ ಲಲಿತ್​ ಲಂಡನ್​ನಲ್ಲಿದ್ದಾರೆ.

2013ರಲ್ಲಿ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಲಲಿತ್ ಅವರಿಗೆ ​ಆಜೀವ ನಿಷೇಧವನ್ನು ಏರಿತು.

ಬಿಜೆಪಿಯ ಹಿರಿಯ ನಾಯಕ ಸುಶೀಲ್​ ಕುಮಾರ್​​ ಮೋದಿ ಅವರು ಗುರುವಾರ ರಾಹುಲ್​ ಹೇಳಿಕೆ ಬಗ್ಗೆ ಮಾತನಾಡಿ, ನಮ್ಮ ವಕೀಲರು ರಾಹುಲ್​ ವಿರುದ್ಧ ಭಾರತೀಯ ದಂಡ ಸಂಹಿತೆ 500 ಸೆಕ್ಷನ್​ ಅಡಿಯಲ್ಲಿ ಪಾಟ್ನಾದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್​ನಲ್ಲಿ(CJM) ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದರು. ಅಲ್ಲದೆ, ರಾಹುಲ್​ ಹೇಳಿಕೆ ಒಂದು ಜಾತಿ ಅಥವಾ ಸಮುದಾಯಕ್ಕೆ ಮಾಡಿದ ಕಳಂಕವಾಗಿದ್ದು, ಮೋದಿ ಎಂಬ ಅಡ್ಡ ಹೆಸರು ಹೊಂದಿರುವವರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಕಿಡಿಕಾರಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *