ಕೋಲ್ಕತಾದಲ್ಲಿ ನಾಳೆ ಮಮತಾ ನೇತೃತ್ವದಲ್ಲಿ ವಿಪಕ್ಷಗಳ ಒಗ್ಗಟ್ಟಿನ ರ‍್ಯಾಲಿ: ರಾಹುಲ್​ ಗಾಂಧಿ ಬೆಂಬಲ

ನವದೆಹಲಿ: ಮಹಾ ಘಟಬಂಧನದ ಮತ್ತೊಂದು ಬೃಹತ್​ ಸಮಾವೇಶ ಎಂದೇ ಕರೆಯಲಾಗುತ್ತಿರುವ, ಮಮತಾ ಬ್ಯಾನರ್ಜಿ ಅವರ ನೇತೃತ್ವದ ಅಖಂಡ ಭಾರತ ರ‍್ಯಾಲಿ ಯೂ ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಶನಿವಾರ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಬೆಂಬಲ ಸೂಚಿಸಿದ್ದಾರೆ.

ಈ ಕುರಿತು ಟಿಎಂಸಿ ವರಿಷ್ಠೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದಿರುವ ರಾಹುಲ್​ ಗಾಂಧಿ, ” ಇದು ಬಿಜೆಪಿ ವಿರುದ್ಧದ ಪಕ್ಷಗಳ ಐಕ್ಯತಾ ಸಮಾವೇಶ,” ಎಂದು ಹೇಳಿದ್ದಾರೆ.
ನಿಜವಾದ ರಾಷ್ಟ್ರೀಯತೆ ಮತ್ತು ಅಭಿವೃದ್ಧಿಯ ಅಡಿಯಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ಇದೇ ನಮ್ಮನ್ನು ಒಂದುಗೂಡಿಸಿದೆ. ಇದರಿಂದ ಮಾತ್ರವೇ ದೇಶದ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳು, ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯನ್ನು ರಕ್ಷಿಸಿಕೊಳ್ಳಲು ಸಾಧ್ಯ. ಆದರೆ, ಈ ಪರಿಕಲ್ಪನೆಗಳನ್ನೇ ಮೋದಿ ಅವರು ಹಾಳು ಮಾಡಲು ಹೊರಟಿದ್ದಾರೆ,” ಎಂದು ರಾಹುಲ್​ ಬರೆದಿದ್ದಾರೆ.

ಮೋದಿ ನೀಡಿದ ಸುಳ್ಳು ಭರವಸೆಗಳಿಂದಾಗಿ ದೇಶದ ಕೋಟ್ಯಂತರ ನಾಗರಿಕರು ಭ್ರಮ ನಿರಸನರಾಗಿದ್ದಾರೆ. ಅವರ ಸುಳ್ಳು ಆಶ್ವಾಸನೆಗಳು ಜನರಲ್ಲಿ ಆಕ್ರೋಶ ಹುಟ್ಟಿಸಿದೆ. ನಮ್ಮ ಕೂಗು ಧರ್ಮ, ಜಾತಿ, ಅಂತಸ್ತುಗಳನ್ನು ಮೀರಿ ಮಹಿಳೆ, ಪುರುಷ, ಮಕ್ಕಳಿಗೂ ಕೇಳಬೇಕು ಎಂದು ಅವರು ಹೇಳಿದ್ದಾರೆ.

ನಾಳೆ ನಡೆಯುತ್ತಿರುವ ಸಮಾವೇಶಕ್ಕೆ ರಾಹುಲ್​ ಗಾಂಧಿ ಮತ್ತು ಸೋನಿಯಾ ಗಾಂಧಿ ನೇರವಾಗಿ ಭಾಗವಹಿಸುತ್ತಿಲ್ಲ. ಅವರ ಪರವಾಗಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಅಭಿಷೇಕ್​ ಮನು ಸಿಂಗ್ವಿ ಭಾಗವಹಿಸುತ್ತಿದ್ದಾರೆ. ಅಲ್ಲದೆ, ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಅವರು ಗೈರಾಗುತ್ತಿದ್ದು, ತಮ್ಮ ಪ್ರತಿನಿಧಿಯಾಗಿ ಸತೀಶ್​ ಮಿಶ್ರಾ ಅವರನ್ನು ನಿಯೋಜಿಸಿದ್ದಾರೆ.

ಇನ್ನು ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ, ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ, ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಮತ್ತಿತರರು ಭಾಗವಹಿಸುತ್ತಿದ್ದಾರೆ.