ಅಮೇಠಿ ಲೋಕಸಭಾ ಕ್ಷೇತ್ರದ ಮತದಾರರು ನಮ್ಮ ಕುಟುಂಬವಿದ್ದಂತೆ: ಬಹಿರಂಗ ಪತ್ರ ಬರೆದ ರಾಹುಲ್​ ಗಾಂಧಿ

ಅಮೇಠಿ: ಕೇಂದ್ರದಲ್ಲಿ ಸ್ಥಿರ ಸರ್ಕಾರ ಸ್ಥಾಪಿಸುವ ನಿಟ್ಟಿನಲ್ಲಿ ದಯವಿಟ್ಟು ನನಗೆ ಮತ ಹಾಕಿ. ನೀವೆಲ್ಲರೂ ನಮ್ಮ ಕುಟುಂಬದ ಭಾಗವಿದ್ದಂತೆ. ಹಾಗಾಗಿ, ಹಿಂದಿನಂತೆ ಈಗಲೂ ನನ್ನನ್ನು ಬೆಂಬಲಿಸಿ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅಮೇಠಿ ಮತದಾರರಿಗೆ ಬಹಿರಂಗವಾಗಿ ಭಾವುಕ ಪತ್ರ ಬರೆದಿದ್ದಾರೆ.

ಮೇ 6ರ ಸೋಮವಾರ ದೊಡ್ಡ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ಎಂದಿನಂತೆ ತಮ್ಮನ್ನು ಬೆಂಬಲಿಸುವ ಮೂಲಕ ಕೇಂದ್ರದ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ತಡೆಹಿಡಿದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕಾಗಿ ಅನುಷ್ಠಾನಗೊಳಿಸಲು ಅನುವು ಮಾಡಿಕೊಂಡುವಂತೆ ರಾಹುಲ್​ ಮನವಿ ಮಾಡಿಕೊಂಡಿದ್ದಾರೆ.

ಅಮೇಠಿ ಪರಿವಾರ್​ (ಅಮೇಠಿ ಕುಟುಂಬ) ಎಂಬ ತಲೆಬರಹ ಹೊಂದಿರುವ ಬಹಿರಂಗ ಪತ್ರದಲ್ಲಿ ಕುಟುಂಬದ ಅವಿಭಾಜ್ಯ ಅಂಗದಂತೆ ಇರುವ ಅಮೇಠಿ ಮತದಾರರ ಪ್ರೀತಿ ಮತ್ತು ಬೆಂಬಲದಿಂದ ರಾಜಕಾರಣದಲ್ಲಿ ಗಟ್ಟಿಯಾಗಿ ನಿಲ್ಲಲು ಅಗತ್ಯ ಸ್ಫೂರ್ತಿ ಪಡೆದುಕೊಳ್ಳುವುದಾಗಿಯೂ, ಜನತೆಯ ಅಹವಾಲು ಆಲಿಸಿ, ಸಂಸತ್​ನಲ್ಲಿ ಅವರ ಪರವಾಗಿ ಧ್ವನಿಯೆತ್ತಲು ಶಕ್ತಿಯನ್ನು ಪಡೆದುಕೊಳ್ಳುವುದಾಗಿ ಹೇಳಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್​ ಸರ್ಕಾರ ಸ್ಥಾಪನೆಗೊಳ್ಳುತ್ತಲೇ ಬಿಜೆಪಿಯವರು ತಡೆಹಿಡಿದಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಮರುಆರಂಭಿಸಲಾಗುವುದು ಎಂದು ಅಮೇಠಿಯ ಜನತೆಗೆ ಭರವಸೆ ನೀಡಲು ಬಯಸುತ್ತೇನೆ. ಆದ್ದರಿಂದ ಮೇ 6ರಂದು ದೊಡ್ಡ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ನಿಮ್ಮ ಕುಟುಂಬದ ಈ ಸದಸ್ಯನನ್ನು ಸಂಸದನನ್ನಾಗಿ ಮರುಆಯ್ಕೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ನೀವು ಹೇಳಿಕೊಟ್ಟ ಏಕತೆಯ ಪಾಠದನ್ವಯ ವಯನಾಡಿನಿಂದ ಸ್ಪರ್ಧೆ
ಅಮೇಠಿಯ ಜತೆಗೆ ಕೇರಳದ ವಯನಾಡಿನಿಂದಲೂ ಸ್ಪರ್ಧಿಸುವ ತಮ್ಮ ನಿರ್ಧಾರವನ್ನು ರಾಹುಲ್​ ಗಾಂಧಿ ಸಮರ್ಥಿಸಿಕೊಂಡಿದ್ದಾರೆ. ನೀವು ಕಲಿಸಿದ ಏಕತೆಯ ಪಾಠದನ್ವಯ ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ಭಾರತವನ್ನು ಒಗ್ಗೂಡಿಸಲು ಮುಂದಾಗಿದ್ದೇನೆ. ಆದ್ದರಿಂದಲೇ ದಕ್ಷಿಣದ ವಯನಾಡಿನಿಂದಲೂ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಕೇಂದ್ರದಲ್ಲಿ ಶ್ರೀಮಂತರ ಪರ ಸರ್ಕಾರ ಸ್ಥಾಪಿಸಲು ಬಿಜೆಪಿ ಯತ್ನ
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್​ ಅಧ್ಯಕ್ಷ, ಕೇಂದ್ರದಲ್ಲಿ ಶ್ರೀಮಂಗ ವರ್ಗದ ಪರ ಸರ್ಕಾರ ಸ್ಥಾಪಿಸುವುದು ಬಿಜೆಪಿಯ ಉದ್ದೇಶವಾಗಿದೆ ಎಂದು ಟೀಕಿಸಿದ್ದಾರೆ.

ನಾವು ಸದಾ ದೀನದಲಿತರು, ರೈತರು, ಮಹಿಳೆಯರು, ಸಣ್ಣ ವ್ಯಾಪಾರಸ್ಥರ ಏಳಿಗೆಗೆ ಶ್ರಮಿಸಬೇಕು ಎಂಬುದು ಅಮೇಠಿಯ ಸಿದ್ಧಾಂತವಾಗಿದೆ. ತನ್ನ ಕರ್ಮಭೂಮಿಯ ಈ ಸಿದ್ಧಾಂತವೇ ಕಾಂಗ್ರೆಸ್​ನ ಅಡಿಪಾಯವಾಗಿದೆ. ಆದರೆ ಬಿಜೆಪಿ ಮಾತ್ರ ಕೇವಲ 15-20 ಕೈಗಾರಿಕೋದ್ಯಮಿಗಳಿಗಾಗಿ ಶ್ರಮಿಸಬೇಕು ಎಂಬ ಸಿದ್ಧಾಂತದೊಂದಿಗೆ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

One Reply to “ಅಮೇಠಿ ಲೋಕಸಭಾ ಕ್ಷೇತ್ರದ ಮತದಾರರು ನಮ್ಮ ಕುಟುಂಬವಿದ್ದಂತೆ: ಬಹಿರಂಗ ಪತ್ರ ಬರೆದ ರಾಹುಲ್​ ಗಾಂಧಿ”

Leave a Reply

Your email address will not be published. Required fields are marked *