ಮುಂದಿನ ದಿನಗಳಲ್ಲಿ ರಾಹುಲ್‌ ಗಾಂಧಿ ಪ್ರಧಾನಿಯಾಗುತ್ತಾರೆ ಎಂದ ಸಿದ್ದರಾಮಯ್ಯ

ಬಾದಾಮಿ: ಮುಂದೆ ರಾಹುಲ್ ಗಾಂಧಿ ಅವರು ಪ್ರಧಾನಿ ಆಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭವಿಷ್ಯ ನುಡಿದಿದ್ದಾರೆ.

ಬಾದಾಮಿಯಲ್ಲಿ ನಡೆಯುತ್ತಿರುವ ಗಂಗಾಮತಸ್ಥ ಅಂಬಿಗರ ಬೃಹತ್ ಸಮಾವೇಶದಲ್ಲಿ ಮಾತನಾಡಿ, ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನೆಲೆಯಿಲ್ಲ. ಸ್ವಲ್ಪಮಟ್ಟಿಗೆ ನೆಲೆ ಇರುವುದು ಕರ್ನಾಟಕದಲ್ಲಿ ಮಾತ್ರ ಇದೆ. ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ ಎಲ್ಲೂ ನೆಲೆ ಇಲ್ಲ. ಹೀಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕರ್ನಾಟಕದ ಕಡೆ ಜಾಸ್ತಿ ಗಮನ ಹರಿಸುತ್ತಿದ್ದಾರೆ. ಕಳೆದ ಸಲ 17 ಸೀಟು ಗೆದ್ದಿದ್ದರು. ಉಪಚುನಾವಣೆಯಲ್ಲಿ ಒಂದು ಸೀಟನ್ನು ಕಳೆದುಕೊಂಡರು. ಮುಂದಿನ ಚುನಾವಣೆಯಲ್ಲಿ ಕೂಡ ಐದು ಸೀಟು ಬರುವುದಿಲ್ಲ. ನಾವು ಕನಿಷ್ಠ ಇಪ್ಪತ್ತೆರಡರಿಂದ ಇಪ್ಪತ್ತ್ಮೂರು ಸೀಟು ಗೆಲ್ಲುತ್ತೇವೆ ಎಂದರು.

ಈ ಸಲ ನೂರಕ್ಕೆ ನೂರು ಪರ್ಸೆಂಟ್‌ ಬಾಗಲಕೋಟೆ ಗೆಲ್ಲುತ್ತೇವೆ. ನಾವು ಸಾಮಾಜಿಕ‌ ನ್ಯಾಯದ ಮೇಲೆ ನಂಬಿಕೆ ಇಟ್ಟವರು ನಾವು. ಎಲ್ಲ ಜನಾಂಗವರಿಗೂ ನ್ಯಾಯ ಸಿಗುತ್ತದೆ. ಬಿಜೆಪಿಯವರು ಯಾರಿಗಾದೂ ಮುಸ್ಲಿಮರು, ಕ್ರಿಶ್ಚಿಯನ್‌ಗಳಿಗೆ ಟಿಕೆಟ್ ಕೊಟ್ಟಿದ್ದಾರಾ? ಗಂಗಾಮತಸ್ಥ ಅಂಬಿಗರನ್ನು ಎಸ್‌ಸಿಗೆ ಸೇರಿಸಬೇಕೆಂದು ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಶಿಫಾರಸ್ಸು ಮಾಡಿದ್ದೆ. ಆದರೆ ಇಂದಿನ ಕೇಂದ್ರ ಸರ್ಕಾರದಲ್ಲಿ ಆಗಲಿಲ್ಲ. ಮುಂದೆ ರಾಹುಲ್ ಗಾಂಧಿ ಪ್ರಧಾನಿ ಆಗುತ್ತಾರೆ. ಆಗ ಗಂಗಾಮತಸ್ಥರನ್ನು ಎಸ್‌ಸಿಗೆ ಸೇರಿಸುವ ಪ್ರಯತ್ನ ಮಾಡುತ್ತೇವೆ ಎಂದರು.

ಲೋಕಸಭಾ ಚುನಾವಣೆ ಬಳಿಕ ಯಾವ ಕಾರಣಕ್ಕೂ ಬಿಜೆಪಿ ಸರ್ಕಾರ ದೇಶದಲ್ಲಿ ಇರಲ್ಲ. ಹಿಂದೆ ಯಡಿಯೂರಪ್ಪ ಸಿಎಂ ಆಗಲ್ಲ ಎಂದು ಹೇಳಿದ್ದೆ. ಕುಮಾರಸ್ವಾಮಿ ಸ್ವಂತ ಬಲದ ಮೇಲೆ ಆಗುವುದಿಲ್ಲ ಎಂದು ಹೇಳಿದ್ದೆ. ಲೋಕಸಭೆಗೆ ಜೆಡಿಎಸ್ ಮೈತ್ರಿ ಆಗುತ್ತದೆ ಆದರೆ ಇನ್ನೂ ಸೀಟು ಹಂಚಿಕೆ ಆಗಿಲ್ಲ. ಮಂಡ್ಯದಲ್ಲಿ ಸುಮಾಲತಾ ನಿಲ್ಲಬೇಕು ಎಂದು ಕಾರ್ಯಕರ್ತರು, ಅಂಬರೀಶ್‌ ಅಭಿಮಾನಿಗಳು ಹೇಳುತ್ತಿದ್ದಾರೆ ಅಷ್ಟೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)