ಮೈತ್ರಿ ಸರ್ಕಾರ ಪತನದ ಬಗ್ಗೆ ಮಾತಾಡಿದರೆ ಕಠಿಣ ಕ್ರಮ: ಕಾಂಗ್ರೆಸ್​ ನಾಯಕರಿಗೆ ರಾಹುಲ್ ಗಾಂಧಿ​ ಎಚ್ಚರಿಕೆ

ನವದೆಹಲಿ: ಮೈತ್ರಿ ಸರ್ಕಾರದ ನಾಯಕರು ನೀಡುತ್ತಿರುವ ಕೆಲವು ಹೇಳಿಕೆಗಳಿಂದ ರಾಜ್ಯ ಸರ್ಕಾರಕ್ಕೆ ಇರಿಸುಮುರಿಸು ಉಂಟಾಗುತ್ತಿದೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್​ ರಾಜ್ಯಾಧ್ಯಕ್ಷ ವಿಶ್ವನಾಥ್​ ನಡುವೆ ಕೆಲವು ವಿಚಾರಕ್ಕೆ ಸಣ್ಣಮಟ್ಟದ ಮನಸ್ತಾಪ ಉಂಟಾಗಿ ಅಲ್ಲಿಗೇ ನಿಂತಿದೆ.

ಹೀಗಿರುವಾಗ ಇಂದು ರಾಜ್ಯ ಕಾಂಗ್ರೆಸ್​ ನಾಯಕರು ದೆಹಲಿಯಲ್ಲಿ ರಾಹುಲ್​ ಗಾಂಧಿಯವರನ್ನು ಭೇಟಿ ನೀಡಿ ಸಭೆ ನಡೆಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್​, ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​​ ಅವರು ದೆಹಲಿಗೆ ತೆರಳಿದ್ದಾರೆ. ಖುದ್ದು ರಾಹುಲ್​ ಗಾಂಧಿಯವರೇ ಇವರನ್ನೆಲ್ಲ ಕರೆಸಿಕೊಂಡು ಸಭೆ ನಡೆಸಿದ್ದಾರೆ ಎನ್ನಲಾಗಿದೆ.

ಸಭೆ ಮುಗಿದ ಬಳಿಕ ಅಲ್ಲಿ ನಡೆದ ವಿಚಾರಗಳನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಮಾಧ್ಯಮಕ್ಕೆ ತಿಳಿಸಿದ್ದಾರೆ. ಕಾಂಗ್ರೆಸ್​ ಜತೆ ನಾವಿದ್ದೇವೆ ಎಂದು ಎಚ್​.ಡಿ.ಕುಮಾರಸ್ವಾಮಿ ಹಾಗೂ ದೇವೇಗೌಡರು ಹೇಳಿದ್ದಾರೆ. ಅಂದ ಮೇಲೆ ಮೈತ್ರಿ ಸರ್ಕಾರ ಬೀಳುತ್ತದೆ ಎಂಬಂಥ ಮಾತುಗಳೇಕೆ ಬರುತ್ತಿವೆ. ಪಕ್ಷದಲ್ಲಿ ಯಾವುದೇ ತರಹದ ಅಶಿಸ್ತನ್ನೂ ನಾವು ಸಹಿಸುವುದಿಲ್ಲ. ನಿಯಮ ಮೀರಿದರೆ ಕಠಿಣ ಕ್ರಮ ಕೈಗೊಳ್ಳಲು ರಾಹುಲ್​ ಗಾಂಧಿ ಸೂಚಿಸಿದ್ದಾರೆ ಎಂದು ದಿನೇಶ್​ ಗುಂಡೂರಾವ್​ ಹೇಳಿದ್ದಾರೆ.

ರಾಜ್ಯದಲ್ಲಿ ಪಕ್ಷ ಮುಂದೆ ಮಾಡಬೇಕಾಗಿರುವ ಕೆಲಸಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಸರ್ಕಾರ ಸುಭದ್ರವಾಗಿದೆ. ಯಾವುದೇ ಸಮಸ್ಯೆಯಿಲ್ಲ. ಎಲ್ಲ ನಾಯಕರ ಹೇಳಿಕೆಗಳ ಬಗ್ಗೆಯೂ ರಾಹುಲ್​ ಗಾಂಧಿಯವರ ಜತೆ ಚರ್ಚೆ ನಡೆಸಿದ್ದೇವೆ. ವಿವಾದಾತ್ಮಕ ಹೇಳಿಕೆಗಳನ್ನು ನೀಡಬಾರದು ಎಂದು ಎಲ್ಲರಿಗೂ ಸೂಚನೆ ನೀಡಲು ರಾಹುಲ್​ ಸೂಚಿಸಿದ್ದಾರೆ ಎಂದು ಅವರು ತಿಳಿಸಿದರು.

ಸಭೆ ಮುಗಿಸಿದ ಬಳಿಕ ಎಲ್ಲ ಕಾಂಗ್ರೆಸ್​ ನಾಯಕರೂ ಕರ್ನಾಟಕ ಭವನಕ್ಕೆ ಆಗಮಿಸಿದ್ದಾರೆ.

Leave a Reply

Your email address will not be published. Required fields are marked *