ಸಿಖ್​ ನರಮೇಧ ಆಗಿದ್ದು ಆಗಿಹೋಯಿತು ಎಂಬ ಸ್ಯಾಮ್​ ಪಿತ್ರೊಡಾ ಹೇಳಿಕೆ ಖಂಡಿಸಿದ ರಾಹುಲ್​ ಗಾಂಧಿ

ನವದೆಹಲಿ: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯ ಬಳಿಕ 1984ರಲ್ಲಿ ನಡೆದ ಸಿಖ್​ ನರೆಮೇಧ ಆಗಿದ್ದು ಆಗಿಹೋಯಿತು ಎಂದು ಕಾಂಗ್ರೆಸ್​ ಮುಖಂಡ ಸ್ಯಾಮ್​ ಪಿತ್ರೊಡಾ ನೀಡಿರುವ ಹೇಳಿಕೆಯನ್ನು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಖಂಡಿಸಿದ್ದಾರೆ.

ಪಿತ್ರೊಡಾ ಅವರ ಹೇಳಿಕೆ ಅತ್ಯಂತ ಬೇಜವಾಬ್ದಾರಿತನದ್ದಾಗಿದೆ. ಆದ್ದರಿಂದ ಅವರು ಕೂಡಲೆ ದೇಶದ ಜನತೆಯ ಕ್ಷಮೆಯಾಚಿಸುವುದು ಒಳಿತು ಎಂದು ಹೇಳಿದರು.

ಖಾಸಗಿ ವೆಬ್​ಸೈಟ್​ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಹುಲ್​ ಗಾಂಧಿ, ತಮ್ಮ ಅಜ್ಜಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ಬೆಂಗಾವಲು ಪಡೆಯ ಇಬ್ಬರು ಸಿಬ್ಬಂದಿಯ ಗುಂಡಿಗೆ ಬಲಿಯಾದ ಬಳಿಕ 1984ರ ಅಕ್ಟೋಬರ್​ 31ರಂದು ನಡೆದ ಸಿಖ್​ ನರಮೇಧ ಅತ್ಯಂತ ದುಃಖದಾಯಕ ಘಟನೆ ಎಂದು ಬಣ್ಣಿಸಿದ್ದಾರೆ. ಈ ಘಟನೆಯಿಂದಾಗಿ ತುಂಬಾ ಜನರಿಗೆ ತುಂಬಾ ನೋವಾಯಿತು. ಆದ್ದರಿಂದ ಅಂದು ನೋವುಂಡ ಪ್ರತಿಯೊಬ್ಬರಲ್ಲೂ ಕ್ಷಮೆಯಾಚಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಕ್ಷಮೆಯಾಚಿಸಿದ ಪಿತ್ರೊಡಾ
1984ರ ಸಿಖ್​ ನರಮೇಧ ಆಗಿದ್ದು ಆಗಿಹೋಯಿತು ಎಂದು ಹೇಳಿಕೆ ನೀಡಿದ್ದ ಸ್ಯಾಮ್​ ಪಿತ್ರೊಡಾ ಇದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ನನ್ನ ಹಿಂದಿ ಅಷ್ಟಾಗಿ ಚೆನ್ನಾಗಿಲ್ಲ. ಅಂದು ಏನಾಯಿತೋ ಅದು ತಪ್ಪಾಯಿತು ಎಂದು ಹೇಳಲು ಪ್ರಯತ್ನಿಸಿದ್ದೆ. ಆದರೆ, ಅದು ಬೇರೊಂದು ಅರ್ಥದಲ್ಲಿ ಮಾತನಾಡಿ ಬಿಟ್ಟಿದ್ದೆ. ಇದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ಪಿತ್ರೊಡಾ ಹೇಳಿದ್ದಾರೆ. (ಏಜೆನ್ಸೀಸ್​)