ರಾಹುಲ್​ ಗಾಂಧಿ ಯಾವ ಪುರುಷಾರ್ಥಕ್ಕೆ ಎಚ್​ಎಎಲ್​ ನೌಕರರೊಂದಿಗೆ ಸಂವಾದ ನಡೆಸುತ್ತಿದ್ದಾರೆ: ಶೋಭಾ ಕರಂದ್ಲಾಜೆ

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಯಾವ ಪುರುಷಾರ್ಥಕ್ಕೆ ಎಚ್​ಎಎಲ್​ ನೌಕರರೊಂದಿಗೆ ಸಂವಾದ ಹಮ್ಮಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.

ಮಿನ್ಸ್ಕ್ ​​ಸ್ಕ್ವೇರ್​​​ನಲ್ಲಿ ಇಂದು ಮಧ್ಯಾಹ್ನ ನಡೆಯಲಿರುವ ರಾಹುಲ್ ಗಾಂಧಿ​ ಕಾರ್ಯಕ್ರಮದ ಕುರಿತು ಶನಿವಾರ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿ, ಯಾವ ಪುರುಷಾರ್ಥಕ್ಕಾಗಿ ಈ ಕಾರ್ಯಕ್ರಮ ಗೊತ್ತಿಲ್ಲ. ಯುಪಿಎ ಆಡಳಿತಾವಧಿಯಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ಸೈನಿಕರಿಗೆ ಅಗತ್ಯ ಸಾಮಾಗ್ರಿಗಳನ್ನು ಒದಗಿಸಲು ಕಾಂಗ್ರೆಸ್ ವಿಫಲವಾಗಿದೆ. ಆದರೆ ನಾವು ಭದ್ರತೆಗೆ ಲಘು ಯುದ್ಧ ವಿಮಾನ ಖರೀದಿಸಿದರೆ ಕಾಂಗ್ರೆಸ್ ಆರೋಪ ಮಾಡುತ್ತಿದೆ ಎಂದರು.

ಈ ಸಂವಾದದ ಮೂಲಕ ರಾಹುಲ್​ ಗಾಂಧಿ ರಾಜಕೀಯ ಮಾಡುತ್ತಿದ್ದಾರೆ. ಮಿನ್ಸ್ಕ್ ​ಸ್ಕ್ವೇರ್​​​​ನಲ್ಲಿ ಯಾವುದೇ ಸಂವಾದಕ್ಕೆ ಅವಕಾಶ ಕೊಡಬಾರದು ಎಂದು ರಫೇಲ್​ ಯುದ್ಧ ವಿಮಾನ ಖರೀದಿ ಹಗರಣದ ಕುರಿತ ಸಂವಾದದ ವಿರುದ್ಧ ಕಿಡಿಕಾರಿದರು.

ನಮ್ಮ ರಾಜ್ಯದಲ್ಲಿ ಎಷ್ಟೊಂದು ಕಂಪನಿಗಳನ್ನು ಮುಚ್ಚಿ ಹಾಕಿರುವ ಕೀರ್ತಿ ನಿಮಗೆ ಸಲ್ಲುತ್ತದೆ. ಎಚ್​ಎಎಲ್​ ಬಗ್ಗೆ ಮಾತನಾಡುವ ಬದಲು ಮೊದಲು ರಾಹುಲ್​ ಗಾಂಧಿ ಮೈತ್ರಿ ಸರ್ಕಾರದಲ್ಲಿ ಮತ್ತು ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಚರ್ಚೆ ಮಾಡಿ ಎಂದು ಆಗ್ರಹಿಸಿದರು. (ದಿಗ್ವಿಜಯ ನ್ಯೂಸ್​)