ದೆಹಲಿಯಲ್ಲಿ ಆಪ್​ಗೆ ನಾಲ್ಕು ಕ್ಷೇತ್ರ ಬಿಟ್ಟುಕೊಡಲು ಕಾಂಗ್ರೆಸ್​ ಸಿದ್ಧ ಎಂದ ರಾಹುಲ್​ ಗಾಂಧಿ

ನವದೆಹಲಿ: ದೆಹಲಿಯಲ್ಲಿ ಕಾಂಗ್ರೆಸ್​ ಮತ್ತು ಆಮ್​ ಆದ್ಮಿ ಪಕ್ಷ ಮೈತ್ರಿ ಮಾಡಿಕೊಳ್ಳುವ ಮೂಲಕ ಬಿಜೆಪಿಗೆ ಸೋಲುಣಿಸಬಹುದು. ಇದಕ್ಕಾಗಿ ಕಾಂಗ್ರೆಸ್​ ನಾಲ್ಕು ಕ್ಷೇತ್ರಗಳನ್ನು ಆಪ್​ಗೆ ಬಿಟ್ಟುಕೊಡಲು ಸಿದ್ಧ ಎಂದು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ತಿಳಿಸಿದ್ದಾರೆ.

ಕಾಂಗ್ರೆಸ್​ ನಾಲ್ಕು ಕ್ಷೇತ್ರಗಳನ್ನು ಬಿಟ್ಟುಕೊಡಲು ಸಿದ್ಧವಿದ್ದರೂ ಸಹ ದೆಹಲಿ ಮುಖ್ಯಮಂತ್ರಿ, ಆಮ್​ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್​ ಮತ್ತೆ ಯೂ ಟರ್ನ್​ ಹೊಡೆದಿದ್ದಾರೆ. ಮೈತ್ರಿಗಾಗಿ ಕಾಂಗ್ರೆಸ್​ ಬಾಗಿಲು ಇನ್ನೂ ತೆರೆದಿದೆ. ಆದರೆ, ಸಮಯ ಕಡಿಮೆ ಇದೆ ಎಂದು ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ದಾರೆ.

ಲೋಕಸಭೆ ಚುನಾವಣೆ ಘೋಷಣೆ ಆದ ದಿನದಿಂದಲೂ ದೆಹಲಿಯಲ್ಲಿ ಮೈತ್ರಿ ಮಾಡಿಕೊಳ್ಳುವ ಕುರಿತು ಆಮ್​ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್​ ಮಾತುಕತೆ ನಡೆಸುತ್ತಿವೆ. ಆದರೆ, ಇದುವರೆಗೂ ಒಮ್ಮತದ ನಿರ್ಧಾರಕ್ಕೆ ಬಂದು ಮೈತ್ರಿಯನ್ನು ಅಂತಿಮಗೊಳಿಸಿಲ್ಲ. (ಏಜೆನ್ಸೀಸ್​)