ರಾಹುಲ್​ ಗಾಂಧಿಯನ್ನು ದೇಶ ಒಪ್ಪಿಕೊಳ್ಳುತ್ತಿದೆ ಎಂದ ಎಂಎನ್​ಎಸ್​ ವರಿಷ್ಠ ರಾಜ್​ ಠಾಕ್ರೆ

ಮುಂಬೈ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್​ ಮೂರು ದೊಡ್ಡ ರಾಜ್ಯಗಳಲ್ಲಿ ಗೆಲುವು ಸಾಧಿಸುತ್ತಲೇ ಕಾಂಗ್ರೆಸ್​ನ ಮಿತ್ರ ಪಕ್ಷಗಳೆಲ್ಲವೂ ರಾಹುಲ್​ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿವೆ. ಈ ನಡುವೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್​ ಠಾಕ್ರೆ ಅವರೂ ರಾಹುಲ್​ ಅವರನ್ನು ಕೊಂಡಾಡಿದ್ದಾರೆ.

” ರಾಹುಲ್​ ಗಾಂದಿಯನ್ನು ನೀವು ಪಪ್ಪು ಎಂದು ಸಂಬೋಧಿಸಿದಿರಿ. ಆದರೆ, ಈಗ ಅವರು ಪರಮ ಪೂಜ್ಯರಾಗುತ್ತಿದ್ದಾರೆ,” ಎಂದು ಅವರು ಹೇಳಿದ್ದಾರೆ. ಅಲ್ಲದೆ, ” ಗುಜರಾತ್​ ಚುನಾವಣೆಯಲ್ಲಿ ರಾಹುಲ್​ ಗಾಂಧಿ ಒಂಟಿಯಾಗಿ ಹೋರಾಡಿದರು. ಕರ್ನಾಟಕದಲ್ಲೂ ಅವರು ಒಂಟಿಯಾಗೇ ಸೆಣಸಿದರು. ಈಗ ನೋಡಿ ನೀವು ಪಪ್ಪು ಎನ್ನುತ್ತಿದ್ದ ವ್ಯಕ್ತಿಯೇ ಪರಮಪೂಜ್ಯರಾಗಿದ್ದಾರೆ. ಅವರ ನಾಯಕತ್ವವನ್ನು ದೇಶದ ಜನತೆ ಒಪ್ಪಿಕೊಳ್ಳುತ್ತಾ ಹೋಗುತ್ತಿದ್ದಾರೆ. ಅದನ್ನು ನೀವೂ (ಬಿಜೆಪಿ) ಕೂಡ ನೋಡುತ್ತಿದ್ದೀರಿ,”ಎಂದಿದ್ದಾರೆ.

ಇದೇ ವೇಳೆ ಅಮಿತ್​ ಷಾ ಮತ್ತು ಮೋದಿ ಅವರನ್ನೂ ತರಾಟೆಗೆ ತೆಗೆದುಕೊಂಡಿರುವ ಠಾಕ್ರೆ, “ಅವರಿಬ್ಬರ ವರ್ತನೆಗಳು ಜನರಲ್ಲಿ ಬೇಸರ ತರಿಸಿದೆ. ಎಲ್ಲ ವಿಭಾಗಗಳಲ್ಲೂ ವಿಫಲರಾಗಿರುವ ಮೋದಿ ಮತ್ತು ಷಾ, ಈಗ ಲೋಕಸಭೆ ಗೆಲ್ಲಲು ರಾಮ ಮಂದಿರದ ವಿಚಾರವನ್ನು ಅತ್ಯಂತ ಜಾಣ್ಮೆಯಿಂದ ಮುಂದೆ ತಂದಿದ್ದಾರೆ,”ಎಂದು ಕಟುವಾಗಿ ವಿಮರ್ಶಿಸಿದ್ದಾರೆ.