ಪುತ್ರರ ಕಳೆದುಕೊಂಡವರಿಗೆ ರಾಹುಲ್ ಸಾಂತ್ವನ

< ಕಾಸರಗೋಡಿನ ಪೆರಿಯ ಕಲ್ಯೋಟ್‌ಗೆ ಭೇಟಿ * ಕುಟುಂಬಕ್ಕೆ ನ್ಯಾಯ ಒದಗಿಸಲು ಬದ್ಧ ಎಂದು ಭರವಸೆ>

ಕಾಸರಗೋಡು: ಜಿಲ್ಲೆಯ ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪೆರಿಯ ಕಲ್ಯೋಟ್‌ನಲ್ಲಿ ಕೊಲೆಗೀಡಾದ ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರ ಪೋಷಕರಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಸಾಂತ್ವನ ಹೇಳಿದರು.

ಕೊಲೆಗೀಡಾದ ಕಾರ್ಯಕರ್ತರಾದ ಕೃಪೇಶ್ ಹಾಗೂ ಶರತ್‌ಲಾಲ್ ಮನೆಗಳಿಗೆ ಭೇಟಿ ನೀಡಿ ಹೆತ್ತವರಿಗೆ ಸಾಂತ್ವನ ಹೇಳಿದರು. ಶಾಸಕ ಹೈಬಿಈಡನ್ ಅವರ ನೇತೃತ್ವದ ‘ತಣಲ್’ ಸಂಸ್ಥೆ ಮೂಲಕ ಕೃಪೇಶ್ ಕುಟುಂಬಕ್ಕೆ ನಿರ್ಮಿಸಿಕೊಡುವ ಮನೆ ಕಾಮಗಾರಿಯನ್ನೂ ವೀಕ್ಷಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ರಾಹುಲ್, ಯುವ ಕಾಂಗ್ರೆಸ್ ಕಾರ್ಯಕರ್ತರ ಬರ್ಬರ ಹತ್ಯೆ ನೋವನ್ನುಂಟುಮಾಡಿದೆ. ಅವರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಲು ಕಾಂಗ್ರೆಸ್ ಬದ್ಧ. ಇದು ದುಃಖತಪ್ತ ಕುಟುಂಬಕ್ಕೆ ನನ್ನ ಭರವಸೆ ಎಂದು ತಿಳಿಸಿದರು.

ಕಾರ್ಯಕರ್ತರಿಗೆ ನಿರಾಸೆ: ಕಾರ್ಯಕರ್ತರ ಅಂತ್ಯಸಂಸ್ಕಾರ ನಡೆಸಲಾದ ಸ್ಮತಿಕುಟೀರಕ್ಕೆ ರಾಹುಲ್ ಭೇಟಿ ನೀಡುವ ಕಾರ್ಯಕ್ರಮವನ್ನು ಕೊನೇ ಕ್ಷಣದಲ್ಲಿ ಕೈಬಿಡಲಾಯಿತು. ರಾಹುಲ್ ಭೇಟಿ ಹಿನ್ನೆಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಸ್ಥಳದಲ್ಲಿ ಕಾದು ನಿಂತಿದ್ದು, ನಿರಾಸೆ ಅನುಭವಿಸಿದರು. ಭದ್ರತೆ ದೃಷ್ಟಿಯಿಂದ ಭೇಟಿ ರದ್ದುಗೊಳಿಸಲಾಯಿತು ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.

ತೃಶ್ಯೂರಿನಲ್ಲಿ ರಾಷ್ಟ್ರೀಯ ಮೀನುಗಾರ ಕಾಂಗ್ರೆಸ್ ಸಮಾವೇಶ ಉದ್ಘಾಟಿಸಿದ ನಂತರ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಹುಲ್, ಮಟ್ಟನ್ನೂರಿನಲ್ಲಿ ಕಿಡಿಗೇಡಿಗಳಿಗೆ ಬಲಿಯಾದ ಯುವ ಕಾಂಗ್ರೆಸ್ ಕಾರ್ಯಕರ್ತ ಶುಹೈಬ್ ಕುಟುಂಬದವರೊಂದಿಗೆ ವಿಐಪಿ ಲಾಂಚ್‌ನಲ್ಲಿ 20 ನಿಮಿಷ ಮಾತುಕತೆ ನಡೆಸಿದರು. ನಂತರ ಹೆಲಿಕಾಪ್ಟರ್ ಮೂಲಕ ಕೇಂದ್ರೀಯ ವಿವಿ ಪೆರಿಯ ಕ್ಯಾಂಪಸ್ ಹೆಲಿಪ್ಯಾಡ್‌ನಲ್ಲಿ ಇಳಿದು ಕಲ್ಯೋಟ್‌ಗೆ ರಸ್ತೆ ಮೂಲಕ ಆಗಮಿಸಿದ್ದರು.

ಎಐಸಿಸಿ ಕಾರ್ಯದರ್ಶಿ, ಕೇರಳ ಉಸ್ತುವಾರಿ ಮುಕುಲ್ ವಾಸ್ನಿಕ್, ಮುಖಂಡರಾದ ಕೆ.ಸಿ ವೇಣುಗೋಪಾಲ್, ಊಮನ್ ಚಾಂಡಿ, ರಮೇಶ್ ಚೆನ್ನಿತ್ತಲ, ಸತೀಶನ್ ಪಾಚೇನಿ, ಮುಲ್ಲಪಳ್ಳಿ ರಾಮಚಂದ್ರನ್, ಕೆ. ಸುಧಾಕರನ್ ಜತೆಗಿದ್ದರು.

ಭಾರಿ ಭದ್ರತೆ: ರಾಹುಲ್ ಭೇಟಿ ಹಿನ್ನೆಲೆಯಲ್ಲಿ ಭಾರಿ ಭದ್ರತೆ ಏರ್ಪಡಿಸಲಾಗಿತ್ತು. ಚಟ್ಟಂಚಾಲ್‌ನಿಂದ ಪೆರಿಯ ಚಾಲಿಂಗಾಲ್‌ವರೆಗಿನ ರಾಷ್ಟ್ರೀಯ ಹೆದ್ದಾರಿ, ಪಳ್ಳಿಕ್ಕರೆ- ಆಲಕ್ಕೋಡ್ ರಸ್ತೆಯಲ್ಲಿ, ಪೆರಿಯ ಕಲ್ಯೋಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮುಂಚಿತವಾಗಿಯೇ ಪರೀಕ್ಷಾ ಕೇಂದ್ರಗಳಿಗೆ ತಲುಪುವಂತೆ ತಿಳಿಸಲಾಗಿತ್ತು.