ರಾಹುಲ್​ ಗಾಂಧಿ ಕಾಂಗ್ರೆಸ್​ಗೆ ಹೊಸ ಶಕ್ತಿ ತುಂಬಿದ್ದಾರೆ: ಸಭೆಯಲ್ಲಿ ಪುತ್ರನನ್ನು ಹೊಗಳಿದ ಸೋನಿಯಾ ಗಾಂಧಿ

ನವದೆಹಲಿ: ನನ್ನ ಮಗ ರಾಹುಲ್​ ಗಾಂಧಿ ಪಕ್ಷಕ್ಕೆ ಹೊಸ ಶಕ್ತಿ ತುಂಬಿದ್ದಾರೆ ಎಂದು ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ಹೇಳಿದರು.

ಪಕ್ಷದ ಅಧ್ಯಕ್ಷರಾಗಿ ಉತ್ಸಾಹ ತುಂಬಿದ್ದಾರೆ. ಎದುರಾಳಿಗಳು ಒಡ್ಡಿದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಅವಿರತವಾಗಿ ದುಡಿದಿದ್ದಾರೆ ಎಂದು ತಮ್ಮ ಪುತ್ರನನ್ನು ಹೊಗಳಿದ್ದಾರೆ.

ನಮ್ಮಲ್ಲಿರುವ ಎಲ್ಲ ಸಮಸ್ಯೆಗಳನ್ನೂ ಪರಿಹರಿಸಿಕೊಂಡು ಹೊಸ ಉತ್ಸಾಹ, ಆತ್ಮವಿಶ್ವಾಸದೊಂದಿಗೆ ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧರಾಗಿದ್ದೇವೆ. ರಾಜಸ್ಥಾನ, ಛತ್ತೀಸ್​ಗಡ ಮತ್ತು ಮಧ್ಯಪ್ರದೇಶದಲ್ಲಿ ಸಿಕ್ಕ ಜಯ ನಮ್ಮಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ ಎಂದು ಕಾಂಗ್ರೆಸ್​ ಸಂಸದೀಯ ಪಕ್ಷದ ಸಾಮಾನ್ಯ ಸಭೆಯಲ್ಲಿ ಹೇಳಿದರು.

ನಮ್ಮ ಪ್ರತಿಪಕ್ಷ ತಾವು ಅಜೇಯರು ಎಂದು ಭಾವಿಸಿತ್ತು. ಆದರೆ, ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರಿಗೆ ಸವಾಲು ಒಡ್ಡಿದರು. ನಮ್ಮ ಪಕ್ಷದ ಲಕ್ಷಲಕ್ಷ ಕಾರ್ಯಕರ್ತರನ್ನು ಪ್ರೇರೇಪಿಸಿ ಅವರಲ್ಲಿ ಉತ್ಸಾಹ ತುಂಬಿದರು. ಪಕ್ಷ ಸಂಘಟನೆಗೆ, ಚುನಾವಣೆಗೆ ಸಜ್ಜುಗೊಳಿಸಿದರು. ರಾಹುಲ್​ ದಣಿವರಿಯದೆ ದುಡಿದಿದ್ದಾರೆ ಎಂದು ಸೋನಿಯಾ ಗಾಂಧಿ ಸಂತಸ ವ್ಯಕ್ತಪಡಿಸಿದರು.

ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೋದಿ ಸರ್ಕಾರ ದಬ್ಬಾಳಿಕೆಯುಕ್ತ, ಭಯ ಹುಟ್ಟಿಸುವ ರೀತಿಯ ಆಡಳಿತ ನಡೆಸುತ್ತಿದೆ. ಪಾರದರ್ಶಕತೆಯೇ ಇಲ್ಲದ ಸರ್ಕಾರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಭೆಯಲ್ಲಿ ರಾಹುಲ್​ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​, ಮಲ್ಲಿಕಾರ್ಜುನ್ ಖರ್ಗೆ ಇತರರು ಇದ್ದರು.