Wednesday, 12th December 2018  

Vijayavani

Breaking News

ರಾಹುಲ್​ಗಾಂಧಿ ಆಗಮನಕ್ಕೆ ಕಾಫಿ ನಾಡಲ್ಲಿ ಸಿದ್ದತೆ

Tuesday, 20.03.2018, 10:30 PM       No Comments

ಚಿಕ್ಕಮಗಳೂರು: ಜಿಲ್ಲಾ ಕಾಂಗ್ರೆಸ್ ಸಮಿತಿಯ ಆಶಯದ ಎರಡು ಸುಸಂದರ್ಭಗಳು ಕೂಡಿ ಬರಲಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೂರನೇ ಬಾರಿ ನಿಗದಿಯಾಗಿರುವ ಪ್ರವಾಸದಂತೆ ಮಾರ್ಚ್ 21ರಂದು ಕಾಫಿ ನಾಡಿಗೆ ಆಗಮಿಸಲಿದ್ದಾರೆ. ಹಾಗೆ ನೋಡಿದರೆ ಕರ್ನಾಟಕ ರಾಜ್ಯದ ರಾಹುಲ್ ಗಾಂಧಿ ಅವರ ಚುನಾವಣಾ ಪ್ರಚಾರದ ಪ್ರವಾಸ ಕಾಫಿ ನಾಡಿನಿಂದಲೇ ಆರಂಭವಾಗಬೇಕಿತ್ತು.

ದಿ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಕಾಫಿ ನಾಡಿನಲ್ಲೇ ಅವರ ಜನ್ಮ ಶತಮಾನೋತ್ಸವವನ್ನು ಮೊಮ್ಮಗ ರಾಹುಲ್ ಗಾಂಧಿ ಅವರಿಂದಲೇ ಉದ್ಘಾಟನೆ ಮಾಡಿಸಬೇಕು ಎಂಬ ಮಹದಾಸೆಯಿಂದ ಕಾರ್ಯಕ್ರಮ ಆಯೋಜನೆ ಮಾಡಿದರೆ ಗುಜರಾತ್ ಚುನಾವಣೆಗೆ ಸಮಯ ನೀಡಬೇಕಾದ ಕಾರಣ ಸಾಧ್ಯವಾಗಲಿಲ್ಲ.

ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಕೆಪಿಸಿಸಿಯಿಂದ ಚಿಕ್ಕಮಗಳೂರಲ್ಲೇ ಅಭಿನಂದನಾ ಸಮಾರಂಭ ಆಯೋಜನೆ ಮಾಡಬೇಕು ಎಂಬ ಮತ್ತೊಂದು ಆಸೆ ಕೂಡ ಫಲಿಸಲಿಲ್ಲ. ಈ ಎರಡು ಅವಕಾಶಗಳನ್ನು ಬಳಕೆ ಮಾಡಿಕೊಂಡು ಚಿಕ್ಕಮಗಳೂರು ಕೋಟೆಯಲ್ಲಿ ಮತ್ತೆ ಕಾಂಗ್ರೆಸ್ ಧ್ವಜ ಹಾರಿಸುವ ಮಹದಾಸೆಗೆ ಭೂಮಿಕೆ ಸಿದ್ಧಮಾಡಿಕೊಳ್ಳುವ ಲೆಕ್ಕಾಚಾರ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಇತ್ತು. ಈ ಸಂದರ್ಭಗಳಲ್ಲಿ ನೆನಪಿನಲ್ಲಿ ಉಳಿಯುವಂತಹ ಕಾರ್ಯಕ್ರಮದ ಆಲೋಚನೆ ಕೂಡ ಇತ್ತು. ಇಂದಿರಾಗಾಂಧಿ ಅವರ ಜನ್ಮ ಶತಮಾನೋತ್ಸವ ಸವಿನೆನಪಿಗೆ ಅವರ ಆಳೆತ್ತರದ ಪ್ರತಿಮೆ ನಿರ್ಮಾಣ ಹಾಗೂ ಚಿಕ್ಕಮಗಳೂರಿಗೆ ಮೆಡಿಕಲ್ ಕಾಲೇಜು ಘೋಷಣೆಯ ಪ್ರಸ್ತಾವನೆಗಳು ಇದ್ದವು.

ಪ್ರತಿಮೆ ನಿರ್ಮಾಣ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕನಸಾಗಿದ್ದರೆ, ರಾಹುಲ್ ಭೇಟಿಯನ್ನೇ ಸ್ಮರಣೀಯವಾಗಿಸಲು ಸರ್ಕಾರದಿಂದ ಮೆಡಿಕಲ್ ಕಾಲೇಜು ಈ ವರ್ಷದಿಂದಲೇ ಆರಂಭಿಸುವ ನಿಟ್ಟಿನಲ್ಲಿ ಆಲೋಚನೆ ಮಾಡಲಾಗಿತ್ತು.

ಈ ಹಿಂದಿನ ಪ್ರವಾಸಗಳಲ್ಲಿ ಜಿಲ್ಲಾ ಕೇಂದ್ರದ ಕಾರ್ಯಕ್ರಮದೊಂದಿಗೆ ಕಡೂರು ಮತ್ತು ತರೀಕೆರೆ ಪಟ್ಟಣಗಳಲ್ಲಿ ರೋಡ್ ಶೋ ನಿಗದಿಯಾಗಿತ್ತು. ಈಗ ಶೃಂಗೇರಿ ಶಾರದೆ ಮತ್ತು ಶೃಂಗೇರಿ ಜಗದ್ಗುರುಗಳ ದರ್ಶನ ಮಾಡಿದ ನಂತರ ಚಿಕ್ಕಮಗಳೂರಿಗೆ ಆಗಮಿಸಿ ರೋಡ್ ಶೋ ಮತ್ತು ಬಹಿರಂಗ ಸಭೆಯಗಳಲ್ಲಿ ಭಾಗವಹಿಸುವ ರಾಹುಲ್ ಗಾಂಧಿ, ಹಾಸನಕ್ಕೆ ತೆರಳಲಿದ್ದಾರೆ.

ಬಿಗಿ ಪೊಲೀಸ್ ಬಂದೋಬಸ್ತ್

ರಾಹುಲ್ ಗಾಂಧಿ ಭೇಟಿ ಹಿನ್ನೆಲೆಯಲ್ಲಿ ನಕ್ಸಲ್ ಪೀಡಿತ ಮಲೆನಾಡ ಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹದಿನೈದು ದಿನದಿಂದ ಬೀಡು ಬಿಟ್ಟಿರುವ ಎಸ್​ಪಿಜಿ ಸುರಕ್ಷತಾ ಕ್ರಮ ತೆಗೆದುಕೊಂಡಿದೆ. ಶಾರದಾಂಬೆ ದೇವಸ್ಥಾನ, ಮಠ, ಸಂಸ್ಕೃತ ವಿಶ್ವವಿದ್ಯಾಯ ಹಾಗೂ ಕಾಂಗ್ರೆಸ್ ಭವನ ಉದ್ಘಾಟನಾ ಸ್ಥಳದಲ್ಲಿ ಪೊಲೀಸರ ಸರ್ಪಗಾವಲು ಇದೆ. ಚಿಕ್ಕಮಗಳೂರು ಮತ್ತು ಶೃಂಗೇರಿ ಕಾರ್ಯಕ್ರಮ ವೇದಿಕೆ ಬಳಿ ಸಾಕಷ್ಟು ಅಂತರ ಕಾಪಾಡಲು ಎಸ್​ಪಿಜಿ ನಿರ್ಧರಿಸಿದೆ. ವಿವಿಐಪಿ ಪಾಸ್ ಇದ್ದ ಕೆಲವರಿಗೆ ಮಾತ್ರ ವೇದಿಕೆಗೆ ಪ್ರವೇಶವಿದೆ. ಚಿಕ್ಕಮಗಳೂರಲ್ಲಿ ಒಂದು ಗಂಟೆ ಮಾತ್ರ ಸಮಯ ಇರುವುದರಿಂದ ರಾಹುಲ್ ಜತೆ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಮಾತ್ರ ಮಾತನಾಡಲಿದ್ದಾರೆ. ರಾಹುಲ್ ಹಿಂದಿ ಭಾಷಣವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಶಂಕರ್ ಕನ್ನಡಕ್ಕೆ ತರ್ಜುಮೆ ಮಾಡಲಿದ್ದಾರೆ. ಮಧ್ಯಾಹ್ನ 2.15ಕ್ಕೆ ಚಿಕ್ಕಮಗಳೂರಿನ ಐಡಿಎಸ್​ಐ ಕಾಲೇಜಿನ ಹೆಲಿಪ್ಯಾಡ್​ಗೆ ಬರುವ ರಾಹುಲ್ ಕಾರಿನಲ್ಲಿ ಪ್ರವಾಸಿ ಮಂದಿರಕ್ಕೆ ಆಗಮಿಸಿ ಊಟ ಮಾಡಲಿದ್ದಾರೆ. ನಂತರ ಪಕ್ಕದ ಜಿಲ್ಲಾ ಆಟದ ಮೈದಾನದಲ್ಲಿ ಒಂದು ಗಂಟೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಸ್ ಮೂಲಕ ಬೇಲೂರಿಗೆ ತೆರಳಲಿದ್ದಾರೆ.

ಪೊಲೀಸ್ ಸರ್ಪಗಾವಲು: ನಕ್ಸಲ್ ಪೀಡಿತ ಮಲೆನಾಡಲ್ಲಿ ರಾಹುಲ್ ಭೇಟಿ ಹಿನ್ನೆಲೆಯಲ್ಲಿ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ನಾಲ್ವರು ಎಎಸ್ಪಿ, ಡಿವೈಎಸ್ಪಿ 7, ಸಿಪಿಐ 22, ಪಿಎಸ್​ಐ 55, ಎಎಸ್​ಐ 102, ಎಚ್​ಸಿಪಿಸಿ 824, ಮಹಿಳಾ ಪೊಲೀಸ್ ಪೇದೆ 58, ಹೋಂಗಾರ್ಡ್ 36 ಸಿಬ್ಬಂದಿ ಭದ್ರತೆ ನಿಯೋಜಿಸಲಾಗಿದೆ. ಇದರ ಜತೆ 4 ಕೆಸ್​ಆರ್​ಪಿ ತುಕಡಿ, 6 ಜಿಲ್ಲಾ ಸಶಸ್ತ್ರ ಮೀಸಲು ಪಡೆ, 2 ಕ್ಷಿಪ್ರ ಕಾರ್ಯ ಪಡೆ ಸಹ ಭದ್ರತೆ ಜವಾಬ್ದಾರಿ ನೀಡಲಾಗಿದೆ. ಜತೆಗೆ ಎಸ್​ಪಿಜಿ ಸಿಬ್ಬಂದಿ ಶೃಂಗೇರಿ ಮತ್ತು ಚಿಕ್ಕಮಗಳೂರಲ್ಲಿ ಬೀಡು ಬಿಟ್ಟಿದೆ.

Leave a Reply

Your email address will not be published. Required fields are marked *

Back To Top