ಪಂಚಾಯಿತಿ ಮಟ್ಟದಲ್ಲಿ ಯುವಜನರಿಗೆ 10 ಲಕ್ಷ ಉದ್ಯೋಗ ನೀಡುತ್ತೇವೆ: ರಾಹುಲ್​ ಗಾಂಧಿ

ಕೋಲಾರ: ಈ ಬಾರಿ ನಾವು ಅಧಿಕಾರಕ್ಕೆ ಬಂದರೆ ಪಂಚಾಯಿತಿ ಮಟ್ಟದಲ್ಲಿ ಯುವಜನರಿಗೆ 10 ಲಕ್ಷ ಉದ್ಯೋಗ ನೀಡುತ್ತೇವೆ. ದೇಶದಲ್ಲಿ ಒಟ್ಟಾರೆ 24 ಲಕ್ಷ ಜನರಿಗೆ ಉದ್ಯೋಗ ನೀಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಭರವಸೆ ನೀಡಿದರು.

ಕೋಲಾರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದ ಅವರು ಅಧಿಕಾರಕ್ಕೆ ಬಂದರೆ ನಾವು ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ. ಉದ್ಯಮಿಗಳ ಕೈಯಲ್ಲಿರುವ ಕೀಗಳನ್ನು ಕಿತ್ತು ಯುವಜನತೆಯ ಕೈಗೆ ನೀಡುತ್ತೇವೆ. ಮಹಿಳೆಯರಿಗೆ ಲೋಕಸಭೆ, ರಾಜ್ಯಸಭೆ ಮತ್ತು ವಿಧಾನಸಭೆಗಳಲ್ಲಿ ಶೇ. 33 ರಷ್ಟು ಮೀಸಲಾತಿ ನೀಡುತ್ತೇವೆ. ನಾವು ಈ ಬಾರಿ ಅಧಿಕಾರಕ್ಕೆ ಬಂದರೆ ಈ ಭರವಸೆಯನ್ನು ಈಡೇರಿಸಲು ಸಿದ್ಧ ಎಂದು ರಾಹುಲ್​ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ 100% ಕಳ್ಳ

ದೇಶದಲ್ಲಿ ಕಳ್ಳತನ ಮಾಡುವವರೆಲ್ಲಾ ಮೋದಿ ಹೆಸರಿನವರೇ. ನರೇಂದ್ರ ಮೋದಿ, ನೀರವ್​ ಮೋದಿ, ಲಲಿತ್​ ಮೋದಿ ಇವರೆಲ್ಲಾ ಕಳ್ಳರು. ನೀರವ್​ ಮೋದಿ ಜತೆ ಫೋಟೋ ತೆಗೆಸಿಕೊಳ್ಳುವ ನೀವು ಬಡ ರೈತನ ಜತೆ ಫೋಟೋ ತೆಗೆಸಿಕೊಳ್ಳುವುದಿಲ್ಲ. ನೋಟು ಅಪಮೌಲ್ಯೀಕರಣದಿಂದ ಬಡವರನ್ನು ಕಷ್ಟಕ್ಕೆ ದೂಡಿದರು. ಜಿಎಸ್​ಟಿ ಹೊರೆ ಹಾಕಿದರು. ಗಬ್ಬರ್​ ಸಿಂಗ್​ ಟ್ಯಾಕ್ಸ್​ ತೆಗೆದು ಸರಳವಾದ ತೆರಿಗೆ ಪದ್ಧತಿ ಜಾರಿಗೊಳಿಸುವುದು ಕಾಂಗ್ರೆಸ್​ನ ಉದ್ದೇಶ. ನರೇಂದ್ರ ಮೋದಿಯವರು ಕೇವಲ ಭಾಷಣ ಮಾಡುತ್ತಾರೆ. ನಾವು ಕೆಲಸ ಮಾಡಿ ತೋರಿಸುತ್ತೇವೆ ಎಂದು ಮೋದಿ ವಿರುದ್ಧ ರಾಹುಲ್​ ಕಿಡಿ ಕಾರಿದರು.

ಪ್ರತಿ ವರ್ಷ ಬಡವರ ಖಾತೆಗೆ 72 ಸಾವಿರ ರೂ.ನಂತೆ 5 ವರ್ಷದಲ್ಲಿ 3.60 ಲಕ್ಷ ರೂ. ಹಣವನ್ನು ಖಾತೆಗೆ ಹಾಕುತ್ತೇವೆ. ನಿಮಗೆ ಹಣ ಎಲ್ಲಿಂದ ಬರುತ್ತದೆ ಎಂದು ಮೋದಿ ಕೇಳುತ್ತಿದ್ದಾರೆ. ಈ ಹಣ ನಿಮ್ಮ ಸ್ನೇಹಿತ ಅನಿಲ್​ ಅಂಬಾನಿ ಬಳಿ ಇದೆ. ಅದನ್ನು ಬಡವರಿಗೆ ನೀಡುತ್ತೇವೆ ಎಂದು ಮೋದಿ ವಿರುದ್ಧ ರಾಹುಲ್​ ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *