ದ್ರಾವಿಡ್​ಗೆ ಹಿತಾಸಕ್ತಿ ಸಂಘರ್ಷವಿಲ್ಲ: ಸಿಒಎ ಘೋಷಣೆ, ಒಂಬುಡ್ಸ್​ಮನ್ ಅಂಗಳದಲ್ಲಿ ಚೆಂಡು

ಮುಂಬೈ: ಟೀಮ್ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಯಾವುದೇ ಸ್ವಹಿತಾಸಕ್ತಿ ಸಂಘರ್ಷ ಹೊಂದಿಲ್ಲ ಎಂದು ಸ್ಪಷ್ಟಪಡಿಸಿರುವ ಆಡಳಿತಾಧಿಕಾರಿಗಳ ಸಮಿತಿ (ಸಿಒಎ), ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್​ಸಿಎ) ‘ಕ್ರಿಕೆಟ್ ಮುಖ್ಯಸ್ಥ’ರಾಗಿ ಅವರ ನೇಮಕವನ್ನು ಅಧಿಕೃತಗೊಳಿಸಿದೆ.

ದ್ರಾವಿಡ್ ವಿರುದ್ಧದ ಸ್ವಹಿತಾಸಕ್ತಿ ಸಂಘರ್ಷ ಪ್ರಕರಣದಲ್ಲಿ ಚೆಂಡು ಈಗ ಬಿಸಿಸಿಐ ಒಂಬುಡ್ಸ್​ಮನ್ ಡಿಕೆ ಜೈನ್ ಅಂಗಳದಲ್ಲಿದೆ ಎಂದು ಸಿಒಎ ಸದಸ್ಯ ಲೆಫ್ಟಿನೆಂಟ್ ಜನರಲ್ ರವಿ ತೋಡ್ಗೆ ತಿಳಿಸಿದ್ದಾರೆ.

‘ದ್ರಾವಿಡ್​ರಲ್ಲಿ ಯಾವುದೇ ಸ್ವಹಿತಾಸಕ್ತಿ ಸಂಘರ್ಷ ಕಾಣಿಸುತ್ತಿಲ್ಲ. ಒಂಬುಡ್ಸ್​ಮನ್​ಗೆ ಯಾವುದಾದರೂ ಸ್ವಹಿತಾಸಕ್ತಿ ಕಂಡುಬಂದರೆ ನಾವು ನಮ್ಮ ವಿವರಣೆಯನ್ನು ನೀಡಲಿದ್ದೇವೆ. ಅದನ್ನು ಪರಿಶೀಲಿಸಿ ಒಂಬುಡ್ಸ್​ಮನ್ ಪ್ರಕರಣವನ್ನು ಮುಂದುವರಿಸಬಹುದು’ ಎಂದು ತೋಡ್ಗೆ ಸಿಒಎ ಸಭೆಯ ಬಳಿಕ ತಿಳಿಸಿದರು. ದ್ರಾವಿಡ್ ಸಾರಥ್ಯದಲ್ಲಿ ಎನ್​ಸಿಎ ಅಂತಾರಾಷ್ಟ್ರೀಯ ದರ್ಜೆಗೆ ಏರಲಿದೆ ಎಂದು ತೋಡ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಚೆನ್ನೈ ಸೂಪರ್ ಕಿಂಗ್ಸ್ ಒಡೆತನ ಹೊಂದಿರುವ ಇಂಡಿಯಾ ಸಿಮೆಂಟ್ಸ್ ಉದ್ಯೋಗಿಯಾಗಿರುವ ಹಿನ್ನೆಲೆಯಲ್ಲಿ ದ್ರಾವಿಡ್, ಎನ್​ಸಿಎ ಮುಖ್ಯಸ್ಥರಾಗಿ ನೇಮಕಗೊಂಡ ಬಳಿಕ ಸ್ವಹಿತಾಸಕ್ತಿ ಸಂಘರ್ಷದ ದೂರು ಎದುರಿಸಿದ್ದರು. ಆದರೆ ದ್ರಾವಿಡ್ ಇಂಡಿಯಾ ಸಿಮೆಂಟ್ಸ್ ಉಪಾಧ್ಯಕ್ಷ ಹುದ್ದೆಯಿಂದ ಅನಿರ್ದಿಷ್ಟಾವಧಿಗೆ ವೇತನರಹಿತ ರಜೆ ಪಡೆದುಕೊಂಡಿದ್ದಾರೆ. -ಪಿಟಿಐ

Leave a Reply

Your email address will not be published. Required fields are marked *