55 ವರ್ಷ ಆಡಳಿತ ನಡೆಸಿದ ರಾಹುಲ್​ ಬಾಬಾ ಕುಟುಂಬ ದೇಶದ ಅಭಿವೃದ್ಧಿಯಲ್ಲಿ ವಿಫಲ: ಅಮಿತ್​ ಷಾ

ಪುಣೆ: ಹತ್ತಿರತ್ತಿರ 55 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಅಧಿಕಾರ ಹೊರತಾಗಿಯೂ​ ಭಾರತದ ಹಣೆಬರಹವನ್ನು ಬದಲಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಅವರು ವಾಗ್ದಾಳಿ ನಡೆಸಿದರು.

ಶನಿವಾರ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್​ ಪಕ್ಷ ಭಾರತದ ರಾಜಕೀಯದಲ್ಲಿ ರಾಜವಂಶದ ಸಂಸ್ಕೃತಿಯನ್ನು ಉತ್ತೇಜಿಸುತ್ತಿದೆ ಎಂದು ಆರೋಪಿಸಿದರು.

ರಾಹಲ್​ ಬಾಬಾ(ರಾಹುಲ್​ ಗಾಂಧಿ) ಮತ್ತು ಅವರ ಕುಟುಂಬದ ಕಂಪನಿ 55 ವರ್ಷಗಳ ಕಾಲ ಆಡಳಿತ ನಡೆಸಿದೆ. ಇದು ಕಡಿಮೆ ಸಮಯವೇನಲ್ಲ. ಅಷ್ಟು ವರ್ಷ ಆಡಳಿತ ನಡೆಸಿದರೂ ದೇಶದಲ್ಲಿ ಹೆಚ್ಚಿನ ಬದಲಾವಣೆಯೇನು ತಂದಿಲ್ಲ. ಆದರೆ, ಪ್ರಧಾನಿ ಮೋದಿ 55 ತಿಂಗಳು ಮಾತ್ರ ಆಡಳಿತ ನಡೆಸಿದ್ದಾರೆ, 55 ವರ್ಷದಲ್ಲಿ ಕಾಂಗ್ರೆಸ್​ ಮಾಡದಿರುವುದನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ಆಡಳಿತವನ್ನು ಪ್ರಶಂಸಿಸಿದರು.

ಇದೇ ಸಮಯದಲ್ಲಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್​ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಷಾ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸರ್ಕಾರಕ್ಕೆ ರಾಜ್ಯದಲ್ಲಿ ಬಿಜೆಪಿಯ ಬೆಳವಣಿಗೆ ಕಂಡು ಹೆದರಿಕೆ ಉಂಟಾಗಿದೆ. ಹೀಗಾಗಿ ಸಮಾವೇಶಕ್ಕೆ ಬರುವ ಬಿಜೆಪಿ ನಾಯಕರನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. (ಏಜೆನ್ಸೀಸ್​)