ರಾಜಸ್ಥಾನ ರಾಯಲ್ಸ್​ ಕಳಪೆ ಪ್ರದರ್ಶನ: ನಾಯಕ ಅಜಿಂಕ್ಯ ರಹಾನೆ ತಲೆದಂಡ

ಜೈಪುರ: ಆರ್​ಸಿಬಿಯಂತೆ ಗೆಲುವಿಗಾಗಿ ಪರದಾಡುತ್ತಿರುವ ರಾಜಸ್ಥಾನ ರಾಯಲ್ಸ್​ ತಂಡದ ನಾಯಕ ಅಜಿಂಕ್ಯ ರಹಾನೆ ಅವರ ತಲೆದಂಡವಾಗಿದ್ದು, ಆಸ್ಟ್ರೇಲಿಯಾದ ಸ್ಟೀವ್​ ಸ್ಮಿತ್​ ಅವರನ್ನು ತಂಡದ ನೂತನ ನಾಯಕನಾಗಿ ನೇಮಿಸಲಾಗಿದೆ.

ಇಂದು ಜೈಪುರದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡದ ಆಡಳಿತ ಮಂಡಳಿ ಈ ಮಹತ್ವದ ನಿರ್ಧಾರವನ್ನು ಘೋಷಿಸಿದೆ. ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ನಿಷೇಧ ಶಿಕ್ಷೆ ಅನುಭವಿಸಿ ತಂಡಕ್ಕೆ ಮರಳಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕನಿಗೆ ಸ್ಮಿತ್​ಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ.

2018ರ ಸೀಸನ್​ ಆರಂಭದಲ್ಲೇ ರಾಜಸ್ಥಾನ ರಾಯಲ್ಸ್​ ತಂಡದ ನಾಯಕರಾಗಿ ಸ್ಮಿತ್​ರನ್ನು ನೇಮಿಸಲಾಗಿತ್ತು. ಆದರೆ, ಚೆಂಡು ವಿರೂಪ ಪ್ರಕರಣದಲ್ಲಿ ಅವರಿಗೆ ನಿಷೇಧ ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ರಹಾನೆಯನ್ನು ನಾಯಕರನ್ನಾಗಿ ನೇಮಿಸಲಾಗಿತ್ತು. ಈ ಸೀಸನ್​ನಲ್ಲೂ ಅವರು ನಾಯಕರಾಗಿ ಮುಂದುವರಿದಿದ್ದರು. ಆದರೆ ರಹಾನೆ ನಿಧಾನಗತಿಯ ಬ್ಯಾಟಿಂಗ್ ಮಾಡಿ ತಂಡದ ಸೋಲಿಗೂ ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ ಮತ್ತು ನಾಯಕತ್ವದ ಜವಾಬ್ದಾರಿ ನಿಭಾಯಿಸುವಲ್ಲೂ ಅವರು ವಿಫಲರಾಗಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಐಪಿಎಲ್​ 12ನೇ ಸೀಸನ್​ನಲ್ಲಿ ರಾಜಸ್ಥಾನ ರಾಯಲ್ಸ್​ ತಂಡ ಆಡಿರುವ 8 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, 6 ಪಂದ್ಯಗಳಲ್ಲಿ ಸೋಲನುಭವಿಸಿದೆ. ಈ ಹಿನ್ನೆಲೆಯಲ್ಲಿ ತಂಡದ ಪ್ಲೇಆಫ್​ ಕನಸು ಕ್ಷೀಣಿಸಿತ್ತು. (ಏಜೆನ್ಸೀಸ್​)