ಬೆಂಗಳೂರು: ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ಇದುವರೆಗೆ 32 ಚಿತ್ರಗಳಿಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಅವುಗಳಲ್ಲಿ ‘ಕಾವ್ಯಾ’, ‘ಬೆಟ್ಟದಪುರದ ದಿಟ್ಟ ಮಕ್ಕಳು’ ಸೇರಿ 15 ಕಾದಂಬರಿಯಾಧಾರಿತ ಚಿತ್ರಗಳು ಎಂಬುದು ವಿಶೇಷ. ಆ ಸಾಲಿಗೆ ಹೊಸ ಸೇರ್ಪಡೆ ‘ಶಾನುಭೋಗರ ಮಗಳು’. ಭಾಗ್ಯ ಕೃಷ್ಣಮೂರ್ತಿ ರಚಿತ ಕಾದಂಬರಿ ಆಧರಿಸಿದ ಚಿತ್ರವಿದು. ಇದೊಂದು ಐತಿಹಾಸಿಕ ಚಿತ್ರವಾಗಿದ್ದು, ಸ್ವಾತಂತ್ರ್ಯ ಪೂರ್ವದ ಕಥೆ ಹೊಂದಿದೆ. ‘ಲಾ’ ಖ್ಯಾತಿಯ ರಾಗಿಣಿ ಪ್ರಜ್ವಲ್ ಹಾಗೂ ‘ಜಾಲಿಡೇಸ್’, ‘ಕೇಸ್ ನಂ.18/9’ ನಟ ನಿರಂಜನ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಹಾಗೂ ಒಂದು ಹಾಡನ್ನು ಬಿಡುಗಡೆಗೊಳಿಸಲಾಯಿತು. ಚಿತ್ರದಲ್ಲಿ ರಾಗಿಣಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದು, ಬ್ರಿಟಿಷರ ವಿರುದ್ಧ ಸಮರ ಸಾರಿದ್ದಾರೆ. ಅವರ ದಿಟ್ಟ ಹೋರಾಟಕ್ಕೆ ನಿರಂಜನ್ ಸಾಥ್ ನೀಡಿದ್ದಾರೆ.
ಕೂಡ್ಲು ರಾಮಕೃಷ್ಣ, ‘ಈ ಐತಿಹಾಸಿಕ ಚಿತ್ರವು ರಾಷ್ಟ್ರಮಟ್ಟದಲ್ಲಿ ಯಶಸ್ವಿಯಾಗಲಿದೆ ಎಂಬ ವಿಶ್ವಾಸವಿದೆ. ಶ್ರೀರಂಗಪಟ್ಟಣ, ಚಿಕ್ಕಬಳ್ಳಾಪುರ ಸೇರಿ ಹಲವೆಡೆ ಆರು ಶೆಡ್ಯೂಲ್‌ಗಳಲ್ಲಿ ಶೂಟಿಂಗ್ ಮಾಡಿದ್ದೇವೆ. ಬಹುತೇಕ ಹೊಸ ಕಲಾವಿದರನ್ನು ಪರಿಚಯಿಸುತ್ತಿದ್ದೇವೆ’ ಎಂದರು.
ಹಿರಿಯ ಕಲಾವಿದ ರಮೇಶ್ ಭಟ್, ‘ಮಾಡೋ ಕೆಲಸದಲ್ಲಿ ತೃಪ್ತಿ ಕಂಡರೆ ಸಾಕು ತಾನಾಗೆಯೇ ಯಶಸ್ಸು ಸಿಗುತ್ತದೆ. ಒಳ್ಳೆಯ ಸಿನಿಮಾ ಮಾಡಿದ ಸಮಾಧಾನವಿದೆ’ ಎಂದರು. ಚಿತ್ರದಲ್ಲಿ ರಿಷಿಕಾ, ಕಿಶೋರ್, ವಾಣಿಶ್ರೀ, ಜೋ ಸೈಮನ್, ಸುಧಾ ಬೆಳವಾಡಿ, ಪದ್ಮಾ ವಾಸಂತಿ ಸೇರಿ ಬಹುತಾರಾಗಣವೇ ಇದೆ. ಜೈ ಆನಂದ್ ಛಾಯಾಗ್ರಹಣ, ಬಿಎ ಮಧು ಸಂಭಾಷಣೆ, ರಮೇಶ್ ಕೃಷ್ಣ ಸಂಗೀತ ಹಾಗೂ ಕವಿರಾಜ್, ಅರಸು ಅಂತಾರೆ ಸಾಹಿತ್ಯದಲ್ಲಿ ‘ಶಾನುಭೋಗರ ಮಗಳು’ ಸಿನಿಮಾ ಮೂಡಿಬಂದಿದೆ.
ನಾನೇ ಡಬ್ಬಿಂಗ್ ಮಾಡಿದ್ದೇನೆ: ‘ಲಾ’ ಚಿತ್ರದ ಮೂಲಕ ನಾಯಕಿಯಾಗಿ ಡೆಬ್ಯೂ ಮಾಡಿದ ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್, ನಂತರ ‘ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ‘ಶಾನುಭೋಗರ ಮಗಳಾಗಿ’ ನಟಿಸುತ್ತಿರುವ ಅವರು, ‘ಅಭಿನಯದಲ್ಲಿ ಅನುಭವ ಕಡಿಮೆ ಇರುವ ಕಾರಣ ಹೆಚ್ಚು ಪರಿಶ್ರಮ ಹಾಕಿ ನಟಿಸಿದ್ದೇನೆ. ಕೆಲವು ದಿನಗಳ ವರ್ಕ್‌ಶಾಪ್ ಮಾಡಿದ್ದೇವೆ. ನನ್ನ ಪಾತ್ರಕ್ಕೆ ನಾನೇ ಡಬ್ಬಿಂಗ್ ಮಾಡಿದ್ದು, ಚಿತ್ರದಲ್ಲಿ ಹೆಚ್ಚು ಶೇಡ್ ಹಾಗೂ ಭಾವನೆಗಳಿವೆ’ ಎಂದು ಹೇಳಿಕೊಂಡರು.
ಮೊದಲ ಭೇಟಿಯಲ್ಲಿಯೇ ಆಯ್ಕೆ: ಪಾತ್ರಕ್ಕೆ ಆಯ್ಕೆಯಾಗಿದ್ದರ ಬಗ್ಗೆ ನಟ ನಿರಂಜನ್ ಶೆಟ್ಟಿ, ‘ಮೊದಲ ಭೇಟಿಯಲ್ಲಿಯೇ ನಾನು ಚಿತ್ರಕ್ಕೆ ನಾಯಕನಟನಾಗಿ ಆಯ್ಕೆಯಾದೆ. ಅಲ್ಲಿಯೇ ನನಗೆ ಸಂಭಾವನೆಯ ಚೆಕ್ ಕೂಡ ಕೊಟ್ಟು ಕಳುಹಿಸಿದ್ದರು. ಐತಿಹಾಸಿಕ ಪಾತ್ರಕ್ಕಾಗಿ ಹೊಂದಿಕೊಳ್ಳಲು ಸಾಕಷ್ಟು ತಯಾರಿ ನಡೆಸಿದ್ದೇನೆ. ಒಂದು ಸುಂದರ ತಂಡದೊಂದಿಗೆ ಕೆಲಸ ಮಾಡಿದ ಅನುಭವ ನನ್ನದು’ ಎಂದು ಸಂತಸ ಹಂಚಿಕೊಂಡರು.